ಸಾರಾಂಶ
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ
ಶಿರಾಳಕೊಪ್ಪ ಪುರಸಭೆಯ ಯಡಿಯೂರಪ್ಪ ಸಭಾಂಗಣದಲ್ಲಿ 2024-25ನೇ ಆರ್ಥಿಕ ವರ್ಷದ ಆಯವ್ಯಯ ಸಿದ್ಧಪಡಿಸಲು ಮಂಗಳವಾರ ಪುರಸಭೆಯಲ್ಲಿ ಸಾವರ್ಜನಿಕರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಯಿತು.ಪುರಸಭಾಧ್ಯಕ್ಷ ಹುದ್ದೆ ಅವಧಿ ಗತಿಸಿದ ಹಿನ್ನೆಲೆ ಖಾಲಿ ಇರುವ ಕಾರಣ ಆಡಳಿತಾಧಿಕಾರಿ ನೂತನ ಉಪವಿಭಾಧಿಕಾರಿ ಯತೀಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಪುರಸಭೆ ಸದಸ್ಯರು ಹಾಗೂ ಸಾವರ್ಜನಿಕರಿಂದ ಸಾಕಷ್ಟು ಸಲಹೆ ಬಂದವು.
ಶಿರಾಳಕೊಪ್ಪ ಪಟ್ಟಣ ಸಾಕಷ್ಟು ಬೆಳೆಯುತ್ತಿದ್ದು, ಉತ್ತಮ ಹೈವೇ ಇರುವ ಕಾರಣ ವಾಹನ ಸಂಚಾರವೂ ಅಧಿಕಗೊಂಡಿದೆ. ಸೂಕ್ತ ಟ್ರಾಫಿಕ್ ವ್ಯವಸ್ಥೆ ಇಲ್ಲದೆ ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ಬಸ್ ನಿಲ್ದಾಣದ ವೃತ್ತದಲ್ಲಿ ಸಿಗ್ನಲ್‌ಗಳಿಲ್ಲ, ಸರಿಯಾದ ವೃತ್ತವೂ ಇಲ್ಲ. ಯಾವಾಗಲೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಂಚಾರ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.ನವೀನ್‌ಕುಮಾರ ಮಾತನಾಡಿ, ಬಸ್ ನಿಲ್ದಾಣ ಮಹಡಿಯಲ್ಲಿ ಕಾಂಪ್ಲೆಕ್ಸ್‌ಗಳಿವೆ. ಆದರೆ ಹಗಲು ಹೊತ್ತಿನಲ್ಲಿ ಓಡಾಡುವ ಸ್ಥಳದಲ್ಲಿ ಕುಡುಕರು ಮಲಗಿರುತ್ತಾರೆ. ಕಂಡ ಕಂಡಲ್ಲಿ ಹೊಲಸು ಮಾಡುತ್ತಾರೆ. ಹೀಗಾದರೆ ಮಹಡಿ ಮೇಲೆ ವ್ಯವಹಾರ ವ್ಯಹಿವಾಟು ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸದಸ್ಯ ರಾಘವೇಂದ್ರ ಮಾತನಾಡಿ, ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಪೌರಕಾರ್ಮಿಕರ ಅವಶ್ಯಕತೆ ಇದೆ. ಕೆಲವು ವಸತಿ ಪ್ರದೇಶಗಳಲ್ಲಿ ತಿಂಗಳಾದರೂ ಕಾಲುವೆ ಕಸ ತೆಗೆಯಲು ಆಗುತ್ತಿಲ್ಲ ಎಂದು ದೂರಿದರು.ಚಿ.ರಾಜು, ತಡಗಣಿ ಮಂಜುನಾಥ ಮಾತನಾಡಿ, ಶಿಕಾರಿಪುರಕ್ಕೆ ಹೋಗುವ ರಸ್ತೆಯಲ್ಲಿ ಸಾಕಷ್ಟು ವ್ಯಾಪಾರಿಗಳು ದೊಡ್ಡ ಅಂಗಡಿ, ಹೋಟೆಲ್ ಕಟ್ಟಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಆದರೆ ಅವರು ಯಾರೂ ಕಟ್ಟಡ ಕಟ್ಟಿಕೊಳ್ಳಲು ಪರವಾನಿಗೆ ತೆಗೆದುಕೊಂಡಿಲ್ಲ. ಕಂದಾಯವೂ ನಿಗದಿ ಆಗಿಲ್ಲ. ಇದರಿಂದಾಗಿ ಪುರಸಭೆಗೆ ಕೋಟ್ಯಂತರ ರು. ನಷ್ಠ ವಾಗುತ್ತಿದೆ. ಅವರಿಂದ ತಕ್ಷಣ ಕಂದಾಯ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪುರಸಭೆ ಮಾಜಿ ನಾಮಕರಣ ಸದಸ್ಯ ಕೆ.ಮಂಜುನಾಥ, ತಡಗಣಿ ಗ್ರಾಮ ಪುರಸಭೆಗೆ ಸೇರಿಸಿಕೊಂಡ ಬಳಿಕ ಅಲ್ಲಿಯ ನಾಗರಿಕರು ಬಳಲುವಂತಾಗಿದೆ. ಗ್ರಾಮದಲ್ಲಿ ಇ-ಸ್ವತ್ತು ಮಾಡಿಸಿಕೊಳ್ಳಲು ಪುರಸಭೆಯಿಂದ ಹಳೇ ದಾಖಲೆ ಕೇಳುತ್ತಾರೆ. ಆದರೆ, ಯಾರಲ್ಲಿಯೂ ಪುರಸಭೆ ಕೇಳುವಂಥ ದಾಖಲೆ ಇಲ್ಲ. ಇದರಿಂದಾಗಿ ಇ-ಸ್ವತ್ತು ದೊರಕುತ್ತಿಲ್ಲ. ತಡಗಣಿ ಗ್ರಾಮದ ವೃತ್ತದಿಂದ ಶಿರಾಳಕೊಪ್ಪಕ್ಕೆ ರಸ್ತೆ ಬದಿ ಹೈಮಾಸ್ಟ್ ವಿದ್ಯುತ್ ದೀಪ ವ್ಯವಸ್ಥೆಯನ್ನು ಕೋಟ್ಯಂತರ ರು. ವೆಚ್ಚದಲ್ಲಿ ಖರ್ಚು ಮಾಡಿ ಅಳವಡಿಸಲಾಗಿತ್ತು. ಆದರೆ ಅವೆಲ್ಲ ಕಳಪೆಯಾಗಿದ್ದು, ದೀಪಗಳೇ ಉರಿಯುತ್ತಿಲ್ಲ. ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳನ್ನು ಕಟ್ಟಲಾಗಿದೆ. ಎಲ್ಲ ಸೌಲಭ್ಯಗಳು ಕಲ್ಪಿಸಲಾಗಿದೆ. ಆದರೆ ಜನರ ಮನೆಗಳ ಖಾತೆಯೇ ದಾಖಲಾಗಿಲ್ಲ ಎಂದು ಸದಸ್ಯ ಮುದಸೀರ್ ಹೇಳಿದರು. ಅದಕ್ಕೆ ಉಪವಿಭಾಧಿಕಾರಿ ಯತೀಕ್ ಪ್ರತಿಕ್ರಿಯಿಸಿ, ಇಂತಹ ಸಮಸ್ಯೆ ರಾಜ್ಯಾದ್ಯಂತ ಇದೆ. ಸರ್ಕಾರವೇ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದುತ್ತರಿಸಿದರು.
ಸದಸ್ಯ ರಾಘವೇಂದ್ರ ಅವರು ಸ್ಥಳೀಯ ಮೆಸ್ಕಾಂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಆಗ ಮೆಸ್ಕಾಂ ಎಇಇ ಅವರು, ನಾವು ಯಾರ ಬಗ್ಗೆಯೂ ನಿರ್ಲಕ್ಷ್ಯ ಮಾಡುವುದಿಲ್ಲ. ಕ್ರಮ ಕೈಗೊಳ್ಳುತ್ತಿದ್ದೇವೆ, ಸಮಸ್ಯೆ ಏನಾದರೂ ಇದ್ದಲ್ಲಿ ಕಚೇರಿಗೆ ಬರಲಿ ಎಂದರು.ಪಟ್ಟಣ ವ್ಯಾಪ್ತಿಯಲ್ಲಿ ಹಂದಿ, ನಾಯಿ ಹಾಗೂ ಬಿಡಾಡಿ ದನಗಳ ಹಾವಳಿ ಬಗ್ಗೆಯೂ ಚರ್ಚೆಯಾಯಿತು. ಮುಖ್ಯಾಧಿಕಾರಿ ಹೇಮಂತ ಸಾರ್ವಜನಿಕರ ಸಮಸ್ಯೆಗಳಿಗೆ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ಎಂ. ಚಂದ್ರಶೇಖರ್, ಪುರಸಭೆ ಸದಸ್ಯರಾದ ತಡಗಣಿ ರಾಜಣ್ಣ, ಮಹಾಬಲೇಶ್, ಮಾಜಿ ಸದಸ್ಯ ಮಂಚಿ ಶಿವಾನಂದ, ಪುರಸಭೆ ಸದಸ್ಯರು ಹಾಜರಿದ್ದು, ಸಲಹೆ ನೀಡಿದರು. ಅಧಿಕಾರಿಗಳು ಹಾಜರಿದ್ದರು.- - -
-24ಕೆಎಸ್‌ಎಚ್ಆರ್1:ಶಿರಾಳಕೊಪ್ಪ ಪುರಸಭೆ ಸಭಾಂಗಣದಲ್ಲಿ ಆಯವ್ಯಯ ಪೂರ್ವಭಾವಿ ಸಭೆ ಉಪವಿಭಾಧಿಕಾರಿ ಯತಿಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಹೇಮಂತ, ಸದಸ್ಯರು, ಅಧಿಕಾರಿಗಳು ಇದ್ದರು.