ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ

| Published : Aug 04 2025, 11:45 PM IST

ಸಾರಾಂಶ

ವಿದ್ಯೆಗೆ ವಿನಯವೇ ಆಧಾರವಾಗಿದ್ದು, ಸಂಸ್ಕಾರ ಬೆಳೆಸಿಕೊಳ್ಳಬೇಕು. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿವೆ, ಇದರ ಉದ್ದೇಶ ಅನಕ್ಷರತೆ ಇರಬಾರದು ಎಂಬುದಾಗಿದೆ, ಆದರೆ ಇಂದು ಸುಶೀಕ್ಷಿತರೇ ಹೆಚ್ಚು ಅಡ್ಡದಾರಿ ಹಿಡಿಯುತ್ತಿದ್ದು, ಇದು ಸಮಾಜಕ್ಕೆ ಮಾರಕವಾಗಿದ್ದು, ಶಿಕ್ಷಣದಲ್ಲಿ ಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಕೋಲಾರವಿಶ್ವ ಯೋಗ ವಿದ್ಯಾ ಟ್ರಸ್ಟ್ ಹಾಗೂ ರಿಷಿ ಸಾಧಕ ಸೇವಾ ಟ್ರಸ್ಟ್‌ನ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳು ಯೋಗ, ಧ್ಯಾನ ಪ್ರಾಣಾಯಾಮಗಳಂತಹ ಸಾಧನೆಗಳ ಮೂಲಕ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಶಾಸಕ ಸಮೃದ್ದಿ ಮಂಜುನಾಥ್ ಹೇಳಿದರು. ಕೋಲಾರ ಜಿಲ್ಲೆಯ ಎಳಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ವಿದ್ಯಾ ಟ್ರಸ್ಟ್ ಹಾಗೂ ರಿಷಿ ಸಾಧಕ ಸೇವಾ ಟ್ರಸ್ಟ್ ಇವರ ವತಿಯಿಂದ ಬೈಸಿಕಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೌಲ್ಯಾಧಾರಿತ ಶಿಕ್ಷಣ ನೀಡಿ

ವಿದ್ಯಾರ್ಥಿಗಳು ಕಲಿಯುವ ಆಸಕ್ತಿಯ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ವಿದ್ಯೆಗೆ ವಿನಯವೇ ಆಧಾರವಾಗಿದ್ದು, ಸಂಸ್ಕಾರ ಬೆಳೆಸಿಕೊಳ್ಳಬೇಕು. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿವೆ, ಇದರ ಉದ್ದೇಶ ಅನಕ್ಷರತೆ ಇರಬಾರದು ಎಂಬುದಾಗಿದೆ, ಆದರೆ ಇಂದು ಸುಶೀಕ್ಷಿತರೇ ಹೆಚ್ಚು ಅಡ್ಡದಾರಿ ಹಿಡಿಯುತ್ತಿದ್ದು, ಇದು ಸಮಾಜಕ್ಕೆ ಮಾರಕವಾಗಿದ್ದು, ಶಿಕ್ಷಣದಲ್ಲಿ ಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ತಿಳಿಸಿದರು.

ವಿಶ್ವ ಯೋಗ ವಿದ್ಯಾ ಟ್ರಸ್ಟ್‌ನ ಸ್ಥಾಪಕ ರಾಜೇಶ್ ಗುರೂಜಿ ಮಾತನಾಡಿ, ಬೈಸಿಕಲ್ ವಿತರಣೆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸಬೇಕು ಹಾಗೂ ಬೈಸಿಕಲ್ ಪಡೆದ ಎಲ್ಲಾ ಮಕ್ಕಳು ಮುಂದಿನ ಜೀವನದಲ್ಲಿ ೧೦ ಮಕ್ಕಳಿಗೆ ಬೈಸಿಕಲ್ ನೀಡುವಂತಹ ಶಕ್ತಿಯನ್ನು ಅಂತಹ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದೇಶದ ಸಂಸ್ಕೃತಿ ಉಳಿಸಬೇಕು

ಭಾರತದ ಆಧ್ಯಾತ್ಮಿಕತೆಯ ಜ್ಞಾನ ಪ್ರಪಂಚದ ಎಲ್ಲಾ ದೇಶಗಳಲ್ಲೂ ತನ್ನದೇ ಆದ ಪ್ರಭಾವವನ್ನು ಉಂಟು ಮಾಡಿದೆ. ನಮ್ಮ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಸಂಸ್ಕಾರ ನೀಡಿದೆ, ಇಂತಹ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಮುಂದಿನ ಪೀಳಿಗೆಯಾದ ನಿಮ್ಮ ಮೇಲಿದೆ ಎಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಧ್ಯಾನ, ಪ್ರಾಣಾಯಾಮ ಹಾಗೂ ಯೋಗಭ್ಯಾಸವನ್ನು ಮಾಡುವುದರಿಂದ ಅವರ ಸ್ಮರಣ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ ಅದರಿಂದ ಉತ್ತಮ ಫಲಿತಾಂಶವನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮೋಹನ್ ಬಾಬು, ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ರಘುಪತಿ ರೆಡ್ಡಿ ಎಡಹಳ್ಳಿ ಸೋಮಶೇಖರ್,ಬಂಡಹಳ್ಳಿ ಲಕ್ಷ್ಮೀನಾರಾಯಣ್,ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶಪ್ಪ ಶಂಕರ್ ಕಾಡೇನಹಳ್ಳಿ ಅಶೋಕ್ , ಹರೀಶ್ ಕೀಲು ಹೊಳಲಿ , ಚಂಗಲ ರಾಯಪ್ಪ ದುಬೈನ ಉದ್ಯಮಿಗಳಾದ ಕೈಲಾಸಮುತ್ತ ಎಳಗೊಂಡಹಳ್ಳಿ ಗ್ರಾಮದ ಕೃಷ್ಣಕುಮಾರ್,ಬಾಬು ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಪೋಷಕರು ಗ್ರಾಮಸ್ಥರು ಹಾಜರಿದ್ದರು.