ಭದ್ರಾ ಡ್ಯಾಂನಿಂದ ಕಾಲುವೆಗೆ ಹರಿಸುತ್ತಿರುವ ನೀರು ಭದ್ರಾ ಅಚ್ಚುಕಟ್ಟು ಪ್ರದೇಶದ ಅನೇಕ ಗ್ರಾಮ, ಕೊನೆಯ ಭಾಗದ ಜಮೀನುಗಳಿಗೆ ತಲುಪದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ನೀರು ತಲುಪಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ತಾಕೀತು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಕಾಲುವೆಗೆ ಹರಿಸುತ್ತಿರುವ ನೀರು ಭದ್ರಾ ಅಚ್ಚುಕಟ್ಟು ಪ್ರದೇಶದ ಅನೇಕ ಗ್ರಾಮ, ಕೊನೆಯ ಭಾಗದ ಜಮೀನುಗಳಿಗೆ ತಲುಪದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ನೀರು ತಲುಪಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ತಾಕೀತು ಮಾಡಿದ್ದಾರೆ.ತಾಲೂಕಿನ ಗೋಣಿವಾಡ, ಶ್ಯಾಗಲೆ, ಮತ್ತಿ, ಲೋಕಿಕೆರೆ ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಹಲವಾರು ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ನಾಲೆ ನೀರು ಸಮರ್ಪಕವಾಗಿ ತಲುಪದ ಬಗ್ಗೆ ದೂರಿದ್ದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಸಮೇತ ಭೇಟಿ ನೀಡಿದ್ದ ಸಚಿವ ಕೆ.ಎಸ್.ಬಸವಂತಪ್ಪ, ಭದ್ರಾ ನಾಲೆಗೆ ಬಿಟ್ಟ ನೀರು ಅಚ್ಚುಕಟ್ಟಿನ ಪ್ರತಿ ಗ್ರಾಮ ಹಾಗೂ ಕೊನೆ ಭಾಗಕ್ಕೆ ತಲುಪಿಸುವ ಕೆಲಸ ಮಾಡಿ ಎಂದರು.
ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಕೆ.ಎಸ್.ಬಸವಂತಪ್ಪ ಬಳಿ ಅಚ್ಚುಕಟ್ಟು ರೈತರು ಮಾತನಾಡಿ, ನಾಲೆಯಲ್ಲಿ ನೀರು ಹರಿಯುತ್ತಿದ್ದರೂ ತಮ್ಮ ಜಮೀನುಗಳಿಗೆ ನೀರು ಬರುತ್ತಿಲ್ಲ. ಪ್ರತಿನಿತ್ಯ ನೀರಿಗಾಗಿ ತೀವ್ರ ಸಮಸ್ಯೆ ಉಲ್ಭಣಿಸುತ್ತಿದೆ. ನಮ್ಮ ಭಾಗಕ್ಕೆ ಸರಿಯಾಗಿ ನೀರು ತಲುಪುತ್ತಿಲ್ಲ. ಇನ್ನು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಜನರಿಗೆ ನೀರು ಮರೀಚಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಮರ್ಪಕವಾಗಿ ನೀರೊದಗಿಸುವಂತೆ ಸೂಚಿಸುವಂತೆ ಮನವಿ ಮಾಡಿದರು.ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀರಾವರಿ ಇಲಾಖೆ ಅಧಿಕಾರಿಗಳು ಯಾವ ವಿಧಾನದಲ್ಲಿ ನಾಲೆಗೆ ನೀರು ಹರಿಸಲಾಗುತ್ತಿದೆಯೆಂಬ ಬಗ್ಗೆ ಪರಿಶೀಲಿಸಿರಿ. ಅಚ್ಚುಕಟ್ಟು ಪ್ರದೇಶದ ರೈತರ ಪರಿಸ್ಥಿತಿಯೇ ಹೀಗಾದರೆ, ಕೊನೆಯ ಭಾಗದ ರೈತರ ಗೋಳು ಹೇಗಿದ್ದೀತು? ತಕ್ಷಣವೇ ಅಚ್ಚುಕಟ್ಟು ಪ್ರದೇಶ, ಕೊನೆ ಭಾಗದ ರೈತರ ಜಮೀನಿಗೂ ನೀರು ತಲುಪಿಸುವ ಜವಾಬ್ದಾರಿ ನಿಮ್ಮದು ಎಂದು ಸೂಚಿಸಿದರು.
ನಾಲೆ ಎರಡೂ ಬದಿ ಬೆಳೆದ ಜಂಗಲ್ ಹಾಗೂ ಕಳೆ ಗಿಡಗಳನ್ನು ತೆರವು ಮಾಡಿಸಿಲ್ಲ. ಮೊದಲು ಅವುಗಳನ್ನು ತೆರವು ಮಾಡಿಸಿ, ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೂ ಅಚ್ಚುಕಟ್ಟು ರೈತರು ನೀರಿನಿಂದ ವಂಚಿತರಾಗಬಾರದು ಎಂದು ಎಚ್ಚರಿಸಿದ ಸಚಿವ ಬಸವಂತಪ್ಪ, ನೀರಾವರಿ ಅಧಿಕಾರಿಗಳ ಸಮಕ್ಷಮದಲ್ಲೇ ಅಧೀಕ್ಷಕ ಅಭಿಯಂತರ ಚನ್ನಬಸಪ್ಪಗೆ ಕರೆ ಮಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ಸಮರ್ಪಕವಾಗಿ ನೀರು ಹರಿಸುವ ನಿಟ್ಟಿನಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಿದರು.ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್. ರಮೇಶ, ಸಹಾಯಕ ಅಭಿಯಂತರರಾದ ತಿಪ್ಪೇಸ್ವಾಮಿ, ಮಧು, ಜೆಇ ಹಾಗೂ ಗೋಣಿವಾಡ, ಕುಕ್ಕವಾಡ, ಮತ್ತಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಇದ್ದರು.
ಚನ್ನಗಿರಿ ತಾ. ಬೆಳ್ಳಿಗನೂಡು ಬಳಿ ಭದ್ರಾ ನಾಲೆ ವೀಕ್ಷಣೆದಾವಣಗೆರೆ: ಚನ್ನಗಿರಿ ತಾ. ಬೆಳ್ಳಿಗನೂಡು ಗ್ರಾಮದ ಬಳಿ ಹಾದು ಹೋಗಿರುವ ಭದ್ರಾ ಮುಖ್ಯ ನಾಲೆಯ ಸೆಕೆಂಡ್ ಜೋನ್ ನಾಲೆಗೆ ಸೋಮವಾರ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ನೀರಾವರಿ ಅಧಿಕಾರಿಗಳು, ರೈತರ ಸಮೇತ ಭೇಟಿ ನೀಡಿ ಪರಿಶೀಲಿಸಿದರು.
ನಾಲೆಯಲ್ಲಿ ನೀರಿನ ಹರಿವು, ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪುತ್ತಿರುವ ರೀತಿ ಹಾಗೂ ರೈತರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಅಚ್ಚುಕಟ್ಟು ರೈತರಿಗೆ ಸಮರ್ಪಕ ನೀರು ತಲುಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ನಾಲೆ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದರು. ನಾಲೆಯಲ್ಲಿರುವ ಅಡಚಣೆಗಳನ್ನು ತೆರವುಗೊಳಿಸಿ, ನೀರು ಹರಿವಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು. ತಮ್ಮ ಭಾಗಕ್ಕೆ ನೀರು ಬಂದಿಲ್ಲವೆಂದು ಯಾವುದೇ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ರೈತರಿಂದ, ಕೊನೆಯ ಭಾಗದ ರೈತರಿಂದ ದೂರು ಬರಬಾರದು. ಸಮರ್ಪಕವಾಗಿ ನೀರೊದಗಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.ಇದೇ ವೇಳೆ ನೀರಾವರಿ ಅಧಿಕಾರಿಗಳು ನಾಲೆ ನೀರಿನ ಹರಿವು ಹಾಗೂ ಅಚ್ಚುಕಟ್ಟು ಪ್ರದೇಶದ ನೀರು ನಿರ್ವಹಣೆ ಕುರಿತು ಸಚಿವರ ಗಮನಕ್ಕೆ ತಂದರು. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ಇದ್ದರು.