ಕನ್ನಡಪ್ರಭ ವಾರ್ತೆ ಬೀಳಗಿ ಘಟಪ್ರಭಾ ಹಾಗೂ ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ದೊರೆಯದೆ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಎಕರೆಗೆ ₹30 ರಿಂದ ₹40 ಸಾವಿರದವರೆಗೆ ಖರ್ಚು ಮಾಡಿ ಬೆಳೆದಿರುವ ಬೆಳೆಗಳನ್ನು ಉಳಿಸಲು ಕಾಲುವೆಯ ಕೊನೆಯವರೆಗೆ ತಕ್ಷಣ ನೀರು ಹರಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಘಟಪ್ರಭಾ ಹಾಗೂ ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ದೊರೆಯದೆ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಎಕರೆಗೆ ₹30 ರಿಂದ ₹40 ಸಾವಿರದವರೆಗೆ ಖರ್ಚು ಮಾಡಿ ಬೆಳೆದಿರುವ ಬೆಳೆಗಳನ್ನು ಉಳಿಸಲು ಕಾಲುವೆಯ ಕೊನೆಯವರೆಗೆ ತಕ್ಷಣ ನೀರು ಹರಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ರೈತರು ಪ್ರಭಾರಿ ಜಿಎಲ್‌ಬಿಸಿ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಅವರನ್ನು ಸ್ಥಳದಲ್ಲಿಯೇ ಕೂರಿಸಿಕೊಂಡು, ನೀರು ಹರಿಸುವ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು. ಸುಮಾರು ಎರಡು ಗಂಟೆಗಳ ಕಾಲ ಮೌನ ಪ್ರತಿಭಟನೆ ನಡೆಸಿದರು.

ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, ರೈತರು ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಬೆಳೆ ಬೆಳೆದಿದ್ದಾರೆ. ಈಗ ಬೆಳೆಗಳು ಫಸಲಿಗೆ ಬಂದಿದ್ದು, ಮಳೆಯ ಕೊರತೆ ಹಾಗೂ ಬರದ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಕಾಲ ನೀರಿನ ಅವಶ್ಯಕತೆಯಿದೆ. ಹೀಗಾಗಿ, ಘಟಪ್ರಭಾ ಎಡದಂಡೆ ಕಾಲುವೆ ಕೊನೆಯವರೆಗೂ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಮಾತ್ರ ನೀರು ಹರಿಸಲು ಸರ್ಕಾರ ಆದೇಶ ನೀಡಿದ್ದು, ಕೃಷಿಗೆ ಬಳಸಲು ಅವಕಾಶವಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಆದ್ದರಿಂದ, ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಸಚಿವರಾದ ವಿಜಯಾನಂದ ಕಾಶಪ್ಪನವರ ಅವರು ಪರಿಸ್ಥಿತಿಯನ್ನು ಮರುಪರಿಶೀಲಿಸಿ, ರೈತರ ಬೆಳೆಗಳನ್ನು ಉಳಿಸುವ ಮಾನವೀಯ ದೃಷ್ಟಿಯಿಂದ ತಕ್ಷಣ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಹಿರೇಮಠ ಆಗ್ರಹಿಸಿದರು. ಪ್ರತಿಭಟನಾಕಾರರ ಜೊತೆ 2 ಗಂಟೆಗಳ ಕಾಲ ಕುಳಿತು ಅಹವಾಲು ಆಲಿಸಿದ ಪ್ರಭಾರಿ ಜಿ.ಎಲ್‌.ಬಿ.ಸಿ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಮಾತನಾಡಿ, ಪ್ರಸ್ತುತ ಹರಿಸುತ್ತಿರುವ ನೀರು ಜಿ.ಎಲ್‌.ಬಿ.ಸಿಯ ನೀರಲ್ಲ. ಕೃಷ್ಣಾ ನದಿಯ ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯಡಿ ಕೃಷಿಯೇತರ ಉದ್ದೇಶಕ್ಕಾಗಿ, ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ನಾಗರಾಳ ಗ್ರಾಮದವರಿಗೆ ಸುಮಾರು 38 ಕಿ.ಮೀ. ಹರಿಸಲಾಗುತ್ತಿದೆ. ರೈತರ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಮಾನವೀಯ ದೃಷ್ಟಿಯಿಂದ ಕಾಲುವೆಯ ಕೊನೆಯವರೆಗೂ ನೀರು ಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನ.1ರಿಂದ ಜಿ.ಎಲ್‌.ಬಿ.ಸಿ. ನೀರನ್ನು 15 ದಿನಗಳ ಕಾಲ ಹರಿಸಲು ಆದೇಶ ಬಂದಿದೆ ಎಂದು ತಿಳಿಸಿದರು.

ರೈತರ ಬೆವರು, ಬಂಡವಾಳ ವ್ಯರ್ಥವಾಗದಂತೆ ಸರ್ಕಾರ ತಕ್ಷಣ ಕಾಲುವೆಯ ಕೊನೆಯವರೆಗೆ ನೀರು ಹರಿಸಬೇಕು. ಇಲ್ಲವಾದರೆ ರೈತರ ಹಿತಕ್ಕಾಗಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ತಹಶೀಲ್ದಾರ ವಿನೋದ ಹತ್ತಳ್ಳಿ ಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗುರಪ್ಪ ಅನಗವಾಡಿ, ರೈತ ಮುಖಂಡರಾದ ಕರಿಯಪ್ಪ ಬಾಡಗಂಡಿ, ವಿಠ್ಠಲ ಮೇರಾಕರ, ಸಿದ್ದಪ್ಪ ನಾಯ್ಕರ, ಶಾಂತಯ್ಯ ಪಂಚಕಟ್ಟಿಮಠ, ಹೊನ್ನಪ್ಪ ಮಳವಾಡಿ, ಎಂ.ಎಂ.ಹುಗ್ಗಿ, ಎಸ್.ಎಸ್.ಬಾಡಗಂಡಿ, ಬಸವರಾಜ ಮುಳವಾಡ, ಡಿ.ಎಸ್.ಬಾಗವಾನ ಸೇರಿ ಅನೇಕ ರೈತರು ಭಾಗವಹಿಸಿದ್ದರು.

-----ಕೋಟ್‌ರೈತರ ಬೆಳೆಗಳ ರಕ್ಷಣೆಗಾಗಿ ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಬೇಕೆಂಬ ರೈತರ ಬೇಡಿಕೆ ಸಮಂಜಸವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಜಿ.ಎಲ್‌.ಬಿ.ಸಿ ಅಧಿಕಾರಿಗಳಿಗೆ ಹಾಗೂ ನಮಗೆ ಸಲ್ಲಿಸಿದ ಮನವಿಯನ್ನು ಕಳಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು.ವಿನೋದ ಹತ್ತಳ್ಳಿ, ತಹಸೀಲ್ದಾರ್‌ ಬೀಳಗಿ