ಮಂಗಳೂರು ಜನರಿಗೆ ಶುದ್ಧ ನೀರೇ ಕೊಡೋದು, ಕಾಂಗ್ರೆಸ್‌ ಆರೋಪ ಸುಳ್ಳು: ಮೇಯರ್‌

| Published : Jan 09 2025, 12:48 AM IST

ಮಂಗಳೂರು ಜನರಿಗೆ ಶುದ್ಧ ನೀರೇ ಕೊಡೋದು, ಕಾಂಗ್ರೆಸ್‌ ಆರೋಪ ಸುಳ್ಳು: ಮೇಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕರಿಸಿದ ನೀರನ್ನೇ ನೀಡುತ್ತಿದ್ದೇವೆ ಎಂಬುದಷ್ಟೇ ಸತ್ಯ. ಸತ್ಯ ಇದೇ ಇರುವಾಗ ಕಾಂಗ್ರೆಸ್‌ನವರ ಸತ್ಯಶೋಧನಾ ಸಮಿತಿಯ ಅಗತ್ಯವೇ ಬರಲ್ಲ ಎಂದು ಟೀಕಿಸಿದ ಮೇಯರ್‌, ಪ್ರತಿ ತಿಂಗಳು ನೀರನ್ನು ಫಿಶರೀಸ್‌ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುತ್ತಿದ್ದು, ಕುಡಿಯಲು ಯೋಗ್ಯವಾದ ನೀರನ್ನೇ ನೀಡುತ್ತಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಶುದ್ಧೀಕರಿಸಿದ ನೀರನ್ನೇ ನೀಡಲಾಗುತ್ತಿದೆ. ನಗರದ ಅರ್ಧದಷ್ಟು ಪ್ರದೇಶಗಳಿಗೆ ಸಂಸ್ಕರಿಸದೇ ಇರುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ವಿಪಕ್ಷ ಕಾಂಗ್ರೆಸ್‌ ನಾಯಕರ ಆರೋಪ ಸುಳ್ಳು ಎಂದು ಮೇಯರ್‌ ಮನೋಜ್‌ ಕುಮಾರ್‌ ಕೋಡಿಕಲ್‌ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರು ಶುದ್ಧೀಕರಣ ನಡೆಯುವ ಬೆಂದೂರು ಘಟಕಕ್ಕೆ ತಾನು ಭೇಟಿ ನೀಡಿದ್ದು, ಅಶುದ್ಧ ನೀರು ಸರಬರಾಜು ಆಗುವುದು ಕಂಡುಬಂದಿಲ್ಲ. ಯಾವುದೇ ಕಾರಣಕ್ಕೂ ನಗರದ ಜನರಿಗೆ ಅಶುದ್ಧ ನೀರು ನೀಡುತ್ತಿಲ್ಲ. ಕಾಂಗ್ರೆಸ್‌ ನಾಯಕರು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರತಿ ತಿಂಗಳು ಪರೀಕ್ಷೆ: ಸಂಸ್ಕರಿಸಿದ ನೀರನ್ನೇ ನೀಡುತ್ತಿದ್ದೇವೆ ಎಂಬುದಷ್ಟೇ ಸತ್ಯ. ಸತ್ಯ ಇದೇ ಇರುವಾಗ ಕಾಂಗ್ರೆಸ್‌ನವರ ಸತ್ಯಶೋಧನಾ ಸಮಿತಿಯ ಅಗತ್ಯವೇ ಬರಲ್ಲ ಎಂದು ಟೀಕಿಸಿದ ಮೇಯರ್‌, ಪ್ರತಿ ತಿಂಗಳು ನೀರನ್ನು ಫಿಶರೀಸ್‌ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುತ್ತಿದ್ದು, ಕುಡಿಯಲು ಯೋಗ್ಯವಾದ ನೀರನ್ನೇ ನೀಡುತ್ತಿದ್ದೇವೆ ಎಂದರು.

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು ಪ್ರದೇಶದಲ್ಲಿ ಒಂದು ಟ್ಯಾಂಕ್‌ನಿಂದ ಒಂದು ಹಂತದ ಶುದ್ಧೀಕರಣ ಆಗಿಯೇ ಸರಬರಾಜು ಆಗುತ್ತಿದೆ. ಅಲ್ಲಿರುವ ಇನ್ನೊಂದು ಟ್ಯಾಂಕ್‌ನಲ್ಲಿ ಶುದ್ಧೀಕರಣ ಆಗಲ್ಲ, ಆ ನೀರನ್ನು ಪಣಂಬೂರಿನಲ್ಲಿ ಶುದ್ಧೀಕರಣ ಮಾಡಿ ಪೂರೈಕೆ ಮಾಡಲಾಗುತ್ತಿದೆ ಎಂದರು.

ಒಳಚರಂಡಿ ನೀರಿನ ಸಂಪರ್ಕ ಇಲ್ಲ:

ಒಳಚರಂಡಿ ನೀರಿಗೂ ಕುಡಿಯುವ ನೀರಿಗೂ ಯಾವ ಸಂಪರ್ಕವೂ ಇಲ್ಲ ಎಂದು ಸ್ಪಷ್ಟಪಡಿಸಿದ ಮೇಯರ್‌, ನಗರದ ಒಳಚರಂಡಿ ವ್ಯವಸ್ಥೆಯ ವೆಟ್‌ವೆಲ್‌ಗಳು, ಎಸ್‌ಟಿಪಿಗಳೆಲ್ಲ ಇರೋದು ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ. ಒಳಚರಂಡಿ ನೀರು ಯಾವ ಕಾರಣಕ್ಕೂ ತುಂಬೆ ಅಣೆಕಟ್ಟು ಸೇರಲ್ಲ ಎಂದು ಹೇಳಿದರು.

ಉಪ ಮೇಯರ್‌ ಭಾನುಮತಿ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳಾ, ಮನೋಹರ ಕದ್ರಿ ಇದ್ದರು.ಫೋಟೊ

8ಮೇಯರ್‌