ಶೈಕ್ಷಣಿಕ ಹಿತಾಸಕ್ತಿ ಕಾಯಬೇಕಾಗಿರುವುದು ಇಂದಿನ ತೀರ ಅಗತ್ಯವಾಗಿದ್ದು, ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಹಾಗೂ ಸೌಲಭ್ಯ ಒದಗಿಸಬೇಕಾಗಿರುವುದು ಎಲ್ಲರ ಹೊಣೆಯಾಗಬೇಕು ಎಂದು ಮಾತೋಶ್ರೀ ಲಿಂ. ರುದ್ರಮ್ಮ ಕಮಡೊಳ್ಳಿ ಸ್ಮಾರಕ ಟ್ರಸ್ಟನ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ತಿಳಿಸಿದರು.

ಹಾನಗಲ್ಲ: ಶೈಕ್ಷಣಿಕ ಹಿತಾಸಕ್ತಿ ಕಾಯಬೇಕಾಗಿರುವುದು ಇಂದಿನ ತೀರ ಅಗತ್ಯವಾಗಿದ್ದು, ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಹಾಗೂ ಸೌಲಭ್ಯ ಒದಗಿಸಬೇಕಾಗಿರುವುದು ಎಲ್ಲರ ಹೊಣೆಯಾಗಬೇಕು ಎಂದು ಮಾತೋಶ್ರೀ ಲಿಂ. ರುದ್ರಮ್ಮ ಕಮಡೊಳ್ಳಿ ಸ್ಮಾರಕ ಟ್ರಸ್ಟನ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ತಿಳಿಸಿದರು. ಶನಿವಾರ ತಾಲೂಕಿನ ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾನಗಲ್ಲ ತಾಲೂಕಿನ 2307 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟಿನಿಂದ ಉಚಿತವಾಗಿ ಕೊಡಮಾಡುತ್ತಿರುವ ಪರೀಕ್ಷಾ ಸಿದ್ಧತಾ ಕೈಪಿಡಿ “ಆಸರೆ” ಪುಸ್ತಕವನ್ನು ವಿತರಿಸಿ ಮಾತನಾಡಿದ ಅವರು, ಬದಲಾದ ಕಾಲಕ್ಕೆ ಬೇಕಾಗುವ ಎಲ್ಲ ಶೈಕ್ಷಣಿಕ ಸೌಲಭ್ಯ ಒದಗಿಸುವುದು ಅವಶ್ಯವಾಗಿದೆ. ಇದೇ ದಿನ ತಾಲೂಕಿನ ಎಲ್ಲ ಪ್ರೌಢಶಾಲೆಗಳ 2307 ಮಕ್ಕಳಿಗೆ ಈ ಆಸರೆ ಪುಸ್ತಕ ತಲುಪಿಸಲಾಗುತ್ತಿದೆ. ಇದು ಪರೀಕ್ಷೆ ಸಿದ್ಧತೆಗೆ ಸಹಕಾರಿಯೂ ಆಗಿದೆ. ಕರ್ನಾಟಕ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಸಿದ್ಧಪಡಿಸಿದ ಈ ಕೈಪಿಡಿ ಮಾದರಿ ಪ್ರಶ್ನೆಗಳನ್ನು ಹೊಂದಿದೆ. ಇದು ಮಕ್ಕಳಿಗೆ ಪರೀಕ್ಷೆಗಾಗಿ ಸಹಕಾರಿಯಾಗಲಿ ಎಂದು ಉಚಿತವಾಗಿ ವಿತರಿಸಲಾಗಿದೆ. ಇಂದು ಮಕ್ಕಳು ಹಿರಿಯರನ್ನು ಗೌರವಿಸುವ ಹಾಗೂ ಮೊಬೈಲ್‌ನಿಂದ ದೂರುವಿರುವ ಜ್ಞಾನ ನೀಡಬೇಕಾಗಿದೆ. ಮಕ್ಕಳಿಗೆ ಒಳ್ಳೆಯದನ್ನು ಕಲಿಸೋಣ. ಅಲ್ಲದ್ದರಿಂದ ದೂರವಿಡೋಣ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕ್ರಣ್ಣ ತಾವರಗೆರೆ ಮಾತನಾಡಿ, ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಇಲ್ಲಿನ ಶಿಕ್ಷಣರು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ. ನಿಜಕ್ಕೂ ಇಲ್ಲಿನ ಶಿಕ್ಷಕರು ಅಭಿನಂದನಾರ್ಹರು. ಸಕಾಲಕ್ಕೆ ಪಾಲಕರ ಸಭೆಗಳನ್ನೂ ನಡೆಸಿ ಮಕ್ಕಳ ಬಗ್ಗೆ ಕಾಳಜಿವಹಿಸಲು ಸೂಚಿಸಲಾಗಿದೆ. ಗ್ರಾಮೀಣ ಮಕ್ಕಳಿಗೆ ಯಾವುದೇ ಶೈಕ್ಷಣಿಕ ಮಾರ್ಗದರ್ಶನದ ಕೊರತೆ ಇಲ್ಲದಂತೆ ಸೇವೆ ನೀಡುತ್ತಿರುವ ಶಿಕ್ಷಕರ ತಂಡ ನಮ್ಮ ಸೌಭಾಗ್ಯ ಎಂದರು. ಮುಖ್ಯೋಪಾಧ್ಯಾಯ ಮಹೇಶ ನಾಯಕ ಮಾತನಾಡಿ, ಮಕ್ಕಳ ಸಂಖ್ಯೆ ಹೆಚ್ಚಿದೆ. ಸೌಲಭ್ಯಗಳ ಕೊರತೆಯೂ ಇದೆ. ಆದರೆ ಸಾರ್ವಜನಿಕರ ಸಹಕಾರಿಂದಾಗಿ ಇಲ್ಲಿ ಹಲವು ಅಗತ್ಯ ಸೌಲಭ್ಯಗಳನ್ನು ಬಳಸಿಕೊಳ್ಳಲಾಗಿದೆ. ಮಕ್ಕಳ ಬಗೆಗೂ ಪಾಲಕರಿಗೆ ಉತ್ತಮ ಮಾರ್ಗದರ್ಶನವೂ ಸಿಗುತ್ತಿದೆ. ಹೀಗಾಗಿ ಇಲ್ಲಿ ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಿದೆ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ರಾಮು ಯಳ್ಳೂರ, ತಿಮ್ಮಣ್ಣ ಅಲಿಲವಾಡ, ಶ್ರೀಕಾಂತ ಅರಳೇಶ್ವರ, ಸೋಮು ನೆರ್ಕಿ, ಮಹೇಶ ಹಿರೇಮಠ, ಗುರುಸಿದ್ದಯ್ಯ ಹಿರೇಮಠ ಅತಿಥಿಗಳಾಗಿದ್ದರು. ಐಶ್ವರ್ಯ ಸಂಗಡಿಗರು ಪ್ರಾರ್ಥನೆ ಹಾಡಿದರು. ಮಹೇಶ ನಾಯಕ ಸ್ವಾಗತಿಸಿದರು. ಸಂತೋಷ ಹುಚ್ಚಣ್ಣನವರ ಕಾರ್ಯಕ್ರಮ ನಿರೂಪಿಸಿದರು.