ಸಾರಾಂಶ
ಪ್ರತಿಯೊಬ್ಬ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ
ಮುಂಡಗೋಡ: ೨೧ನೇ ಶತಮಾನ ಯೋಗ್ಯತೆ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಗುರುತಿಸುವಂತಹ ಶತಮಾನವಾಗಿದೆ. ಹಾಗಾಗಿ ಪ್ರತಿಯೊಬ್ಬ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಶುಕ್ರವಾರ ತಾಲೂಕಿನ ಪಾಳಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ತರಗತಿ ಪ್ರಾರಂಭೋತ್ಸವ ಮತ್ತು ಕಟ್ಟಡ ಪೂಜೆ ನೆರವೇರಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಬಿಟ್ಟು ಉಳಿದೆಲ್ಲ ಶಾಲಾ ಕಾಲೇಜಿಗಳಿಗೂ ಸ್ವಂತ ಕಟ್ಟಡಗಳಿದ್ದವು. ಹೀಗಾಗಿ ₹೧೮ ಕೋಟಿ ವೆಚ್ಚದಲ್ಲಿ ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದು ಹೇಳಿದರು.
ಪ್ರಾಂಶುಪಾಲರು ಹಾಗೂ ಶಿಕ್ಷಕರು ವಸತಿ ಶಾಲೆಯಲ್ಲಿ ಯಾವುದನ್ನು ನಿರೀಕ್ಷೆ ಮಾಡದೇ ಮಕ್ಕಳಿಗೆ ಕೊಡುವ ಆಹಾರ ಪದಾರ್ಥ ಹಾಗೂ ವಸ್ತುಗಳ ಯಾವುದೇ ದುರುಪಯೋಗವಾಗದಂತೆ ಜಾಗ್ರತೆ ವಹಿಸುವಂತೆ ಕಿವಿಮಾತು ಹೇಳಿದರು.ಮಾಜಿ ಶಾಸಕ ವಿ.ಎಸ್. ಪಾಟೀಲ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೆಹಳ್ಳಿ, ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಹದೇವಪ್ಪ ಹ್ಯಾಟಿ, ಪಾಳಾ ಗ್ರಾಪಂ ಅಧ್ಯಕ್ಷ ಚಂದ್ರಗೌಡ ಪಾಟೀಲ, ಓಣಿಕೇರಿ ಗ್ರಾಪಂ ಅಧ್ಯಕ್ಷ ಸುರೇಶ ಸುಭಾಂಜಿ, ಪಿಡಿಒ ಹಾಗೂ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಉಪಸ್ಥಿತರಿದ್ದರು.
ಶಾಸಕ ಶಿವರಾಮ ಹೆಬ್ಬಾರ್ ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ತರಗತಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.