ಕಡ್ಲೆಗೊಂದಿ ಗ್ರಾಮದ ಸೂರಿಲ್ಲದವರಿಗೆ ವಸತಿ ಕಲ್ಪಿಸಿ

| Published : Sep 04 2025, 01:00 AM IST

ಸಾರಾಂಶ

ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದಲ್ಲಿ ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮಂಗಳವಾರ ಹೊರವಲಯದ ಪ್ರೊ. ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲೂಕು ಕಚೇರಿವರೆಗೆ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ವಸತಿ ಸೌಲಭ್ಯ ವಂಚಿತರು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ಆಗಮಿಸಿ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

- ಹರಿಹರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ದಸಂಸ ಮುಖಂಡರ ಆಗ್ರಹ

- - -

ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ಕಡ್ಲೆಗೊಂದಿ ಗ್ರಾಮದಲ್ಲಿ ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮಂಗಳವಾರ ಹೊರವಲಯದ ಪ್ರೊ. ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲೂಕು ಕಚೇರಿವರೆಗೆ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ವಸತಿ ಸೌಲಭ್ಯ ವಂಚಿತರು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ಆಗಮಿಸಿ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಗಾಂಧಿ ಸರ್ಕಲ್‌ನಲ್ಲಿ ಕೆಲ ಸಮಯ ಮಾನವ ಸರಪಳಿ ರಚಿಸಿ, ನಂತರ ತಾಲೂಕು ಕಚೇರಿಗೆ ಆಗಮಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, ಕಡ್ಲೆಗೊಂದಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಬಡ ಕುಟುಂಬಗಳು ಅತ್ಯಂತ ಚಿಕ್ಕ ಗುಡಿಸಲು, ನೆರಿಕೆ ಮನೆಗಳಲ್ಲಿ ಕಲುಷಿತ ವಾತಾವರಣದಲ್ಲಿ ವಾಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸಿ, ಬಡಜನರಿಗೆ ವಿತರಿಸಲು ಸಂಘಟನೆ ಹಲವು ವರ್ಷಗಳಿಂದ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದೆ. ಆದರೆ ತಾಲೂಕು ಮತ್ತು ಜಿಲ್ಲಾಡಳಿತ ವಸತಿ ಸಮಸ್ಯೆ ನಿವಾರಣೆ ಮಾಡಿಲ್ಲ ಎಂದು ಕಿಡಿಕಾರಿದರು.

ಗ್ರಾಮದ ಸರ್ವೆ ನಂ.೩೭ರಲ್ಲಿನ ೧೦ ಎಕರೆ ಸರ್ಕಾರಿ ಜಮೀನಿನಲ್ಲಿ ವಿವಿಧ ಯೋಜನೆಗಳಿಗೆ ನೀಡಿದ ನಂತರ ಇನ್ನೂ ೫ ಎಕರೆ ೩೫ ಗುಂಟೆ ಜಮೀನು ಉಳಿದಿದೆ. ಅದರಲ್ಲಿ ಕೂಡಲೇ ವಸತಿ ಯೋಜನೆ ರೂಪಿಸಬೇಕೆಂದು ಆಗ್ರಹಿಸಿದರು.

ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಈ ಹಿಂದೆಯೂ ವಸತಿ ಯೋಜನೆಗಾಗಿ ವಿವಿಧ ಪ್ರತಿಭಟನೆಗಳ ಮಾಡಿದಾಗ ತಾಲೂಕು ಆಡಳಿತ ಭೂ ನ್ಯಾಯ ಮಂಡಳಿ ರಚಿನೆ ಆಗಬೇಕೆಂದು ಕಾರಣ ಹೇಳಿತ್ತು. ಈಗ ಮಂಡಳಿ ರಚನೆಯಾಗಿದ್ದು, ಸಮಸ್ಯೆಗೆ ಪರಿಹಾರ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ವಿಜಯಲಕ್ಷ್ಮೀ, ಗ್ರಾಪಂ ಉಪಾಧ್ಯಕ್ಷೆ ಮಾತಂಗೆಮ್ಮ ತಿಮ್ಮಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ಚೆನ್ನಗಿರಿ ಚಿತ್ರಲಿಂಗಪ್ಪ, ನ್ಯಾಮತಿ ತಾಲೂಕು ಸಂಚಾಲಕ ಚಂದ್ರಪ್ಪ, ಹೊನ್ನಾಳಿ ತಾಲೂಕು ಸಂಚಾಲಕ ಪರಮೇಶ್ ಬೆನಕನಾಳ್, ಜಗಳೂರು ತಾಲೂಕು ಸಂಚಾಲಕ ಕುಬೇರಪ್ಪ ಸೇರಿದಂತೆ ಪದಾಧಿಕಾರಿಗಳು ಹಾಗೂ ಇತರರಿದ್ದರು.

- - -

(ಕೋಟ್‌) ಎಲ್ಲರಿಗೂ ಆಹಾರ, ವಸತಿ, ಆರೋಗ್ಯ, ಶಿಕ್ಷಣದಂತಹ ಮೂಲಸೌಕರ್ಯ ಒದಗಿಸುವುದು ಸರ್ಕಾರಗಳ ಜವಾಬ್ದಾರಿ. ವಸತಿರಹಿತ, ಬಡಜನರಿಗೆ, ದಲಿತ, ಹಿಂದುಳಿದ ಅಸಹಾಯಕ ಕುಟುಂಬಗಳ ವಸತಿಗೆ ಸರ್ಕಾರಿ ಭೂಮಿ ಮಂಜೂರು ಮಾಡಲು ಸಹ ಕಾನೂನಿನಲ್ಲಿ ಅವಕಾಶವಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುವುದು.

- ಪಿ.ಜೆ. ಮಹಾಂತೇಶ್‌, ತಾಲೂಕು ಸಂಚಾಲಕ.

- - -

-02HRR. 01& 01A:

ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ ನಿರ್ವಸತಿಕರಿಗೆ ವಸತಿ ಯೋಜನೆಗೆ ಆಗ್ರಹಿಸಿ ಕದಸಂಸ ನೇತೃತ್ವದಲ್ಲಿ ಫಲಾನುಭವಿಗಳು ಮೈತ್ರಿವನದಿಂದ ಪಾದಯಾತ್ರೆ ಮೂಲಕ ಆಗಮಿಸಿ ನಗರದ ಗಾಂಧಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.