ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಮ್ಯಾಕಲಜೇರಿ ಗ್ರಾಮದಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಗುದ್ದಲಿ ಪೂಜೆ ನೆರವೇರಿಸಿದರು.

ಕೆರೆ ಹೂಳೆತ್ತುವ ಕಾಮಗಾರಿಗೆ ಚಂದ್ರಶೇಖರ ಕಂದಕೂರ ಚಾಲನೆ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಮ್ಯಾಕಲಜೇರಿ ಗ್ರಾಮದಲ್ಲಿ ವಿಬಿಜಿ-ರಾಮ್‌ಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಗಾ ಯೋಜನೆಯ ಬದಲಾಗಿ ಜು. ೧ರಿಂದ ವಿಬಿಜಿ-ರಾಮ್‌ಜಿ ಯೋಜನೆ ಜಾರಿಯಾಗಿದೆ. ಈ ಯೋಜನೆಯಲ್ಲಿ ಕೂಲಿಯ ಮೊತ್ತ ₹೩೮೨ಆಗಿದೆ. ಒಂದು ಜಾಬ್ ಕಾರ್ಡ್ ಗೆ ವರ್ಷಕ್ಕೆ ೧೦೦ ದಿನಗಳ ಬದಲಾಗಿ ೧೨೫ ದಿನಗಳ ಕಾಲ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ವಿಬಿಜಿ-ರಾಮ್‌ಜಿ ಯೋಜನೆಯಲ್ಲಿ ನರೇಗಾ ಕಾಮಗಾರಿಗಳು ಅಷ್ಟೇ ಅಲ್ಲದೆ ಇನ್ನಷ್ಟು ಕಾಮಗಾರಿಗಳನ್ನು ಅಳವಡಿಸಿಕೊಂಡು ಒಟ್ಟು ೩೭೫ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ. ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಮುದಾಯ ಕಾಮಗಾರಿಗಳು ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆರೆ ಅಭಿವೃದ್ಧಿ, ಚಕ್ ಡ್ಯಾಂ ನಿರ್ಮಾಣ ಶಾಲಾ ಕೊಠಡಿ, ತೋಟಗಾರಿಕೆ ಬೆಳೆಗಳು, ರೇಷ್ಮೆ ಬೆಳೆ ಬೆಳೆಯಲು ಅವಕಾಶವಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಎನ್ಎಂಎಂಎಸ್ ಹಾಜರಾತಿ ಕಡ್ಡಾಯವಾಗಿ ಕೂಲಿಕಾರರು ಎರಡು ಬಾರಿ ಹಾಜರಿ ಹಾಕಿದರೆ ಮಾತ್ರ ಕೂಲಿ ಸಿಗಲಿದೆ. ಅಳತೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ ₹೩೮೨ ಕೂಲಿ ಮೊತ್ತ ಸಿಗಲಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ಸಂಪೂರ್ಣ ಕೂಲಿ ಸಿಗುವುದಿಲ್ಲ ಎಂದರು.

ಈ ವೇಳೆ ತಾಂತ್ರಿಕ ಸಹಾಯಕ ಅಭಿಯಂತರ ಗುರು ಫಕ್ಕೀರಗೌಡ್ರ, ಡಿಇಒ ಮುದಕಪ್ಪ ದೊಣೆಗುಡ್ಡ, ಜಿಕೆಎಂ ಅನ್ನಪೂರ್ಣ ಹಿರೇಮಠ, ಕಾಯಕ ಬಂಧುಗಳು ಸೇರಿ ಕೂಲಿಕಾರರು ಇದ್ದರು.