ಸಾರಾಂಶ
ಜನಮುಖಿ ಸೇವಾ ಮನಸ್ಸಿನ ಸಮಾನ ಮನಸ್ಕರ ಗೆಳೆಯರ ತಂಡವಾದ ಸನ್ಮಾರ್ಗ ಗೆಳೆಯರ ಬಳಗ ಕಳೆದ 10 ವರ್ಷಗಳಿಂದಲೂ ಬಸ್‌ನಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡುತ್ತಾ ಬರುತ್ತಿದೆ
ಕೆ.ಎಂ.ಮಂಜುನಾಥ್
ಬಳ್ಳಾರಿ: ಕಳೆದ ದಶಕದಿಂದ ಹತ್ತಾರು ಜನಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಇಲ್ಲಿನ ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು ಬೇಸಿಗೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರಿ ಬಸ್‌ಗಳಲ್ಲಿ ತಂಪಾದ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಬಳ್ಳಾರಿ ನಗರ ಸೇರಿದಂತೆ ರಾಜ್ಯದ ವಿವಿಧೆಡೆ ತೆರಳುವ ಬಸ್‌ಗಳಲ್ಲಿ ಕುಡಿವ ನೀರಿನ ಕ್ಯಾನ್‌ಗಳನ್ನು ವಿತರಿಸುತ್ತಿದ್ದು, ನೀರು ಭರ್ತಿ ಮಾಡಿಕೊಳ್ಳಲು ಹಣವನ್ನು ಸಹ ಪಾವತಿಸುತ್ತಿದ್ದಾರೆ. ಇದರಿಂದಾಗಿ ಬಳ್ಳಾರಿ ಬಿಸಿಲಿಗೆ ಬಸವಳಿವ ಜನರು ನಿರುಮ್ಮಳವಾಗಿ ಬಸ್‌ನಲ್ಲಿ ಪ್ರಯಾಣಿಸಲು ಅನುಕೂಲವಾದಂತಾಗಿದೆ.ಕ್ಯಾನ್-ಸ್ಟಿಕ್ಕರ್-ಹಣ ಪಾವತಿ:
ಜನಮುಖಿ ಸೇವಾ ಮನಸ್ಸಿನ ಸಮಾನ ಮನಸ್ಕರ ಗೆಳೆಯರ ತಂಡವಾದ ಸನ್ಮಾರ್ಗ ಗೆಳೆಯರ ಬಳಗ ಕಳೆದ 10 ವರ್ಷಗಳಿಂದಲೂ ಬಸ್‌ನಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡುತ್ತಾ ಬರುತ್ತಿದೆ (ಕೋವಿಡ್ ದಿನಗಳು ಹೊರತುಪಡಿಸಿ) ಈ ಹಿಂದೆ ಬಳಗದ ಸದಸ್ಯರೇ ನೀರು ತಂಪಾಗಿಸಲು ವಾಟರ್ ಕ್ಯಾನ್‌ಗೆ ಗೋಣಿಚೀಲದಿಂದ ಹೊಲಿದು ಶುದ್ಧ ನೀರಿನ ಘಟಕದಿಂದ ನೀರು ಭರ್ತಿ ಮಾಡಿಕೊಂಡು ಬಂದು ಬಸ್ ಗಳಿಗೆ ಕೊಡುತ್ತಿದ್ದರು. ಜೊತೆಗೆ "ಈ ಬಸ್‌ನಲ್ಲಿ ಕುಡಿವ ನೀರಿನ ವ್ಯವಸ್ಥೆಯಿದೆ " ಎಂಬ ಸ್ಟಿಕ್ಕರ್ ಸಹ ನೀಡುತ್ತಿದ್ದರು. ಬಳ್ಳಾರಿ ನಗರದಲ್ಲಿ ಸುತ್ತಾಡುವ ಬಸ್ ಸೇರಿದಂತೆ ಬಳ್ಳಾರಿ ವಿಭಾಗದಿಂದ ರಾಜ್ಯದ ನಾನಾ ಕಡೆ ತೆರಳುವ ಬಸ್‌ಗಳಲ್ಲಿ ನೀರಿನ ವ್ಯವಸ್ಥೆಯಾಗುತ್ತಿತ್ತು. ಆದರೆ, ಈ ವರ್ಷದಿಂದ ಬಸ್ ಚಾಲಕ ಅಥವಾ ನಿರ್ವಾಹಕರೇ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ವಾಟರ್ ಕ್ಯಾನ್ ಜೊತೆಗೆ ನೀರು ಖರೀದಿಗೆ ₹60 ಸಹ ನೀಡುತ್ತಿದ್ದಾರೆ.ಕೆಲವರು ದುಡ್ಡು ಬೇಡ ಅಂತಾರೆ:
ಕೆಲವು ಚಾಲಕರು, ನಿರ್ವಾಹಕರು ಹಣ ಕೊಡುವುದು ಬೇಡ. ಗೋಣಿಚೀಲದಿಂದ ಹೊಲಿದ ಕ್ಯಾನ್‌ಗಳನ್ನಷ್ಟೇ ಕೊಡಿ. ನಾವೇ ಹಣ ಕೊಟ್ಟು ನೀರು ತುಂಬಿಸಿಕೊಂಡು ಹೋಗುತ್ತೇವೆ. ನಿಮ್ಮ ಸೇವೆಯ ಜೊತೆಗೆ ನಾವೂ ಕೈ ಜೋಡಿಸುತ್ತೇವೆ ಎನ್ನುತ್ತಾರೆ. ಹೀಗಾಗಿ ಹಣ ಬೇಡ ಎನ್ನುವವರಿಗೆ ಕ್ಯಾನ್‌ಗಳು, ಬಸ್‌ಗೆ ಸ್ಟಿಕ್ಕರ್ ಹಾಗೂ ಲೋಟಗಳನ್ನಷ್ಟೇ ನೀಡುತ್ತೇವೆ. ಕಳೆದ ನಾಲ್ಕೈದು ದಿನಗಳಿಂದ ಬಸ್‌ಗಳಿಗೆ ನೀರು ಪೂರೈಕೆಯ ಕೆಲಸ ಶುರು ಮಾಡಿದ್ದು, ಸದ್ಯ 15 ಬಸ್‌ಗಳಿಗೆ ತಲಾ 20 ಲೀಟರ್‌ನ ಎರಡು ಕ್ಯಾನ್, ಸ್ಟೀಲ್ ಗ್ಲಾಸ್, ಹಣ ನೀಡಲಾಗುತ್ತಿದೆ ಎನ್ನುತ್ತಾರೆ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್.ಸೇವಾ ಕೈಂಕರ್ಯ: ಸಮಾಜಮುಖಿ ಚಿಂತನೆಯ ಗೆಳೆಯರು ಸೇರಿಕೊಂಡು ದಶಕದ ಹಿಂದೆ "ಸನ್ಮಾರ್ಗ ಗೆಳೆಯರ ಬಳಗ " ಹುಟ್ಟುಹಾಕಿದ್ದಾರೆ. ಸನ್ಮಾರ್ಗ ಬಳಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ಉಪನ್ಯಾಸಕರು, ಶಿಕ್ಷಕರು, ಲೇಖಕರು, ಚಿಂತಕರು, ಉದ್ಯಮಿಗಳು ಇದ್ದಾರೆ. ವರ್ಷದುದ್ದಕ್ಕೂ ಅನೇಕ ಸೇವಾ ಕಾರ್ಯ ಕೈಗೊಳ್ಳುವ ಇವರು ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ. ತಿಂಗಳಿಗೆ ಇಂತಿಷ್ಟೆಂದು ತಾವೇ ಹಣ ಕ್ರೋಡೀಕರಿಸಿಕೊಂಡು ಸಮಾಜಸೇವಾ ಚಟುವಟಿಕೆ ನಡೆಸುತ್ತಿದ್ದಾರೆ.
ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸನ್ಮಾರ್ಗ ಗೆಳೆಯರ ಬಳಗದಿಂದ ಬಸ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ದುಬಾರಿ ಹಣ ನೀಡಿ ಬಾಟಲ್ ನೀರು ಖರೀದಿ ಕಷ್ಟ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ನಲ್ಲಿ ತಂಪಾದ ನೀರು ಕೊಡುತ್ತಿದ್ದೇವೆ ಎನ್ನುತ್ತಾರೆ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ.