ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ರಸ್ತೆ ಮಧ್ಯೆ ಗೋವಿನ ರುಂಡ ಪತ್ತೆಯಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ವಿರುದ್ಧ ಉಡುಪಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ.ರಸ್ತೆಯಲ್ಲಿ ಗೋವಿನ ರುಂಡ ಎಸೆದ ಕೃತ್ಯ, ಇದೊಂದು ಪೂರ್ವ ನಿಯೋಜಿತ ಕೃತ್ಯ, ಸಂಘ ಪರಿವಾರ ಮತ್ತು ಬಿಜೆಪಿ ನಾಯಕರ ಗಲಭೆ ಸೃಷ್ಟಿಸುವ ಹುನ್ನಾರದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಕಡಂಬು ಅವರು ಈ ಆಧಾರ ರಹಿತ ಹೇಳಿಕೆಯಿಂದ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವ ಸಾಧ್ಯತೆ ಇದೆ ಎಂದು ಪೊಲೀಸರು ಸ್ವಯಂ ಆಸಕ್ತಿಯಿಂದ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಗೋವಿನ ರುಂಡ ರಸ್ತೆ ಮಧ್ಯೆ ಹಾಕಿದ ಬಗ್ಗೆ ಈಗಾಗಲೇ ಪ್ರಕರಣದಲ್ಲಿ ಆರು ಜನರ ಬಂಧನವಾಗಿದ್ದು, ಅವರ ವಿರುದ್ಧ ಪೊಲೀಸರು ಮೊದಲ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಹಿಂದು ಮುಖಂಡ ಶರಣ್ ಪಂಪ್‌ವೆಲ್ ಅವರು ಉಡುಪಿಯಲ್ಲಿ ಈ ಕೃತ್ಯದ ಹಿಂದೆ ಮುಸ್ಲಿಂ ಮುಲಭೂತಗಳಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು, ಅವರ ವಿರುದ್ಧ ಪ್ರಚೋದನಾಕಾರಿ, ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಾಗಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಕಡುಂಬು ಮೇಲೆ 3ನೇ ಪ್ರಕರಣ ದಾಖಲಿಸಿದ್ದಾರೆ.