ರೌಡಿಶೀಟರ್‌ಗೆ ನಿವೇಶನ: ಮಂಜೂರಿಗೆ ಪಿಎಸ್‌ಐ ಯತ್ನ ಆರೋಪ

| Published : Feb 06 2024, 01:33 AM IST

ಸಾರಾಂಶ

ಬೇಲುರು ತಾಲೂಕಿನ ಬಿಕ್ಕೋಡು ಗ್ರಾಮದ ಸಮೀಪವಿರುವ ಎರಡು ಎಕರೆ ಸರ್ಕಾರಿ ಜಾಗವನ್ನು ರೌಡಿಶೀಟರ್ ಪಟ್ಟಿಯಲ್ಲಿರುವ ಚಂದ್ರೇಗೌಡ ಎಂಬುವರಿಗೆ ಮಾಡಿಸಿಕೊಡಲು ಬೇಲೂರು ಠಾಣೆ ಸಬ್‌ ಇನ್ಸ್‌ಪೆಕ್ಟರ್ ಜಯರಾಮ್ ಆಸಕ್ತಿ ವಹಿಸಿದ್ದು, ಫಾರಂ ೫೭ ರಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಕ್ಕೋಡು ಗ್ರಾಮಸ್ಥರು ಆರೋಪಿಸಿದರು.

ಸುದ್ದಿಗೋಷ್ಠಿ । ಫಾರಂ 57 ರಡಿ ಅರ್ಜಿ ಸಲ್ಲಿಸಿದವರಿಗೆ ಸಬ್‌ ಇನ್‌ಸ್ಪೆಕ್ಟರ್‌ ಬೆದರಿಕೆ । ಬಿಕ್ಕೋಡು ಗ್ರಾಮಸ್ಥರ ದೂರು

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡು ಗ್ರಾಮದ ಸಮೀಪವಿರುವ ಎರಡು ಎಕರೆ ಸರ್ಕಾರಿ ಜಾಗವನ್ನು ರೌಡಿಶೀಟರ್ ಪಟ್ಟಿಯಲ್ಲಿರುವ ಚಂದ್ರೇಗೌಡ ಎಂಬುವರಿಗೆ ಮಾಡಿಸಿಕೊಡಲು ಬೇಲೂರು ಠಾಣೆ ಸಬ್‌ ಇನ್ಸ್‌ಪೆಕ್ಟರ್ ಜಯರಾಮ್ ಆಸಕ್ತಿ ವಹಿಸಿದ್ದು, ಫಾರಂ ೫೭ ರಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಕ್ಕೋಡು ಗ್ರಾಮಸ್ಥರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವೆ ನಂಬರ್ 18ರಲ್ಲಿ 6 ಎಕರೆ ಸರ್ಕಾರಿ ಜಾಗವಿದ್ದು ಅದರಲ್ಲಿ ಎರಡು ಎಕರೆ ಸ್ವಾಧೀನವಾಗದೆ ಉಳಿದಿರುತ್ತದೆ. ಎರಡು ಎಕರೆ ಜಾಗದಲ್ಲಿ ನಿವೇಶನ ಪಡೆಯಲು ಫಾರಂ ನಂಬರ್ 53 ರಲ್ಲಿ 150ಕ್ಕೂ ಹೆಚ್ಚು ಜನ ಬಗರ್ ಹುಕುಂ ಕಮಿಟಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ರೌಡಿಶೀಟರ್ ಪಟ್ಟಿಯಲ್ಲಿರುವ ಚಂದ್ರೇಗೌಡ ಎಂಬುವರು ಫಾರಂ 53 ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಎರಡು ಎಕರೆ ಸರ್ಕಾರಿ ಜಾಗದಲ್ಲಿ ಬೇಲಿ ಹಾಕಲು ಮುಂದಾಗಿದ್ದಾರೆ. ವಿಪರ್ಯಾಸವೆಂದರೆ ಇದುವರೆಗೆ ಯಾವುದೇ ಅರ್ಜಿಗಳು ಬಗರ್ ಹುಕುಂ ಕಮಿಟಿಯ ಗಮನಕ್ಕೆ ಬಂದಿರುವುದಿಲ್ಲ. ಅಲ್ಲದೆ ಪಹಣಿ ತೆಗೆಸಿದರೆ ಅದರಲ್ಲಿ ಸರ್ಕಾರಿ ಜಾಗ ಎಂದು ನಮೂದಿಸಿದೆ. ಇಷ್ಟಾದರೂ ಚಂದ್ರೇಗೌಡರು ಬೇಲೂರು ಪೊಲೀಸ್ ಠಾಣೆಯಲ್ಲಿ 5 ಜನರ ಮೇಲೆ ಸುಳ್ಳು ದೂರು ಸಲ್ಲಿಸಿರುತ್ತಾರೆ. ಈ ವಿಷಯದ ಬಗ್ಗೆ ಸಬ್ ಇನ್‌ಸ್ಪೆಕ್ಟರ್ ಜಯರಾಮ್ 20ಕ್ಕೂ ಹೆಚ್ಚು ಬಾರಿ ತಮ್ಮನ್ನು ಠಾಣೆಗೆ ಕರೆಸಿಕೊಂಡು ಚಂದ್ರೇಗೌಡ ಪರವಾಗಿ ವಕಾಲತ್ತು ವಹಿಸಿಕೊಂಡು ಮಾತನಾಡಿರುತ್ತಾರೆ ಎಂದು ದೂರಿದರು.

‘ಕಳೆದ ವಾರ ನಮ್ಮನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ ಇದು ಸಿವಿಲ್ ವ್ಯಾಜ್ಯವಾದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ತಹಸೀಲ್ದಾರ್ ಅವರಿಗೆ ವರ್ಗಾಯಿಸುತ್ತೇನೆ. ಅವರು ಸ್ಥಳ ಪರಿಶೀಲನೆ ಮಾಡುತ್ತಾರೆ, ಅಲ್ಲಿಯವರೆಗೆ ಯಾರೂ ಎರಡು ಎಕರೆ ಸರ್ಕಾರ ಜಾಗಕ್ಕೆ ಬೇಲಿ ಹಾಕುವಂತಿಲ್ಲ ಎಂದು ಚಂದ್ರೇಗೌಡ ಸೇರಿ ನಮಗೂ ತಿಳುವಳಿಕೆ ಹೇಳಿ ಕಳುಹಿಸಿದ್ದರು. ಆದರೆ ಶನಿವಾರ ವಿವಾದದಲ್ಲಿರುವ ಎರಡು ಎಕರೆ ಸರ್ಕಾರಿ ಜಾಗಕ್ಕೆ ಅರೇಹಳ್ಳಿ ಹಾಗೂ ಬೇಲೂರು ಸಬ್ ಇನ್‌ಸ್ಪೆಕ್ಟರ್ ಇಬ್ಬರೂ ನಮ್ಮನ್ನು ಕರೆಸಿಕೊಂಡು ಈ ಜಾಗ ಚಂದ್ರೇಗೌಡರಿಗೆ ಸೇರುತ್ತದೆ. ಈ ಜಾಗಕ್ಕೆ ಕಾಲಿಡಬೇಡಿ ಎಂದು ಬೆದರಿಕೆ ಹಾಕಿರುತ್ತಾರೆ’ ಎಂದು ಆರೋಪಿಸಿದರು.

ರೌಡಿಶೀಟರ್ ಪಟ್ಟಿಯಲ್ಲಿರುವ ಚಂದ್ರೇಗೌಡರ ಪರವಾಗಿ ಬೇಲೂರು ಸಬ್ ಇನ್‌ಸ್ಪೆಕ್ಟರ್ ಜಯರಾಮ್ ಅವರು ಅತಿಯಾದ ಆಸಕ್ತಿಯನ್ನು ವಹಿಸಿರುತ್ತಾರೆ. ಸಿವಿಲ್ ವ್ಯಾಜ್ಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ತಹಸೀಲ್ದಾರ್‌ಗೆ ತಿಳಿಸುವುದಾಗಿ ಹೇಳಿ ಈಗ ಏಕಾಏಕಿ ತಮ್ಮ ನಿಲುವನ್ನು ಬದಲಾಯಿಸಿ ಈ ಜಾಗ ಚಂದ್ರೇಗೌಡರಿಗೆ ಸೇರುತ್ತದೆ ಎಂದು ಹೇಳುತ್ತಿದ್ದಾರೆ. ಯಾವ ರೀತಿಯ ಆಮಿಷಕ್ಕೆ ಒಳಗಾಗಿ ಚಂದ್ರೇಗೌಡರ ಪರ ನಿಂತಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಮಾನಸಿಕವಾಗಿ ಬೇಸರವಾಗಿದ್ದು ಈ ವಿಷಯದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಕ್ಕೋಡು ಗ್ರಾಮಸ್ಥರಾದ ಚಂದನ್, ಯೋಗೇಶ್, ಆಸಿಫ್ ಯದುನಂದನ್, ನಯಾಜ್ ಅಹ್ಮದ್ ಇದ್ದರು.

ಫೋಟೋ: ಬೇಲೂರಿನ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಕ್ಕೋಡು ಗ್ರಾಮಸ್ಥರು ಮಾತನಾಡಿದರು.