ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ ಪಿಎಸ್‌ಐ ಅನ್ನಪೂರ್ಣಾ!

| Published : Apr 15 2025, 12:46 AM IST

ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ ಪಿಎಸ್‌ಐ ಅನ್ನಪೂರ್ಣಾ!
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲೆಡೆ ಈಗ ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್‌ ಮಾಡಿದ ಅನ್ನಪೂರ್ಣಾ ಮುಕ್ಕಣ್ಣವರ ಅವರದ್ದೇ ಚರ್ಚೆ. ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರಿನ ಪೇಜ್‌ಗಳು ತೆರೆದುಕೊಂಡು ಶ್ಲಾಘನೆಯ ಮಹಾಪುರ ಹರಿಸುತ್ತಿವೆ.

ಹುಬ್ಬಳ್ಳಿ:ಎಲ್ಲೆಡೆ ಈಗ ಬಾಲಕಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್‌ ಮಾಡಿದ ಅನ್ನಪೂರ್ಣಾ ಮುಕ್ಕಣ್ಣವರ ಅವರದ್ದೇ ಚರ್ಚೆ. ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರಿನ ಪೇಜ್‌ಗಳು ತೆರೆದುಕೊಂಡು ಶ್ಲಾಘನೆಯ ಮಹಾಪುರ ಹರಿಸುತ್ತಿವೆ.

ಲೇಡಿ ಸಿಂಗಂ, ಗೋಕಾಕರ ವೀರವನಿತೆ, ಎನ್‌ಕೌಂಟರ್‌ ಲೇಡಿ.... ಹೀಗೆ ಪೇಸ್‌ಬುಕ್‌, ಇನ್‌ಸ್ಟ್ರಾಗ್ರಾಂ, ವಾಟ್ಸಪ್ ಗ್ರೂಫ್‌ಗಳಲ್ಲಿ ಪಿಎಸ್‌ಐ ಅನ್ನಪೂರ್ಣಾ ರಾರಾಜಿಸುತ್ತಿದ್ದಾರೆ.

ಗೋಕಾಕದ ಕುವರಿ: ಪಿಎಸ್‌ಐ ಅನ್ನಪೂರ್ಣಾ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದವರು. ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡವರು. ತಾಯಿಯ ಆಶ್ರಯದಲ್ಲಿ ಬೆಳದರೂ ಸಾಹಸಿ. ಮುಕ್ಕಣ್ಣವರ ಕುಟುಂಬದ 9 ಜನ ಮಕ್ಕಳಲ್ಲಿ ಇವರು ಕೊನೆಯವರು. ನಾಲ್ವರು ಅಣ್ಣಂದಿರು, ನಾಲ್ವರು ಅಕ್ಕಂದಿರಿದ್ದಾರೆ. ಅವರ ಸಹಾಯದಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಅಗ್ರಿ ಪದವಿ, ನಂತರ ಬಂಗಾರದ ಪದಕದೊಂದಿಗೆ ಎಂಎಸ್ಸಿ ಪದವಿ ಪಡೆದಿದ್ದಾರೆ.

ಸ್ನಾತಕೋತ್ತರ ಕೃಷಿ ಪದವಿ ಪಡೆದು ಅದೇ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅವಕಾಶವಿದ್ದರೂ ಅನ್ನಪೂರ್ಣ ಮಹಿಳೆಯರ ರಕ್ಷಣೆಗಾಗಿ ಪೊಲೀಸ್‌ ವೃತ್ತಿ ಆಯ್ಕೆ ಮಾಡಿಕೊಂಡರು. ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ವಿಭಾಗದಲ್ಲಿ ಮೊದಲು ವೃತ್ತಿಯಲ್ಲಿದ್ದರು. ಐದಾರು ತಿಂಗಳ ಹಿಂದೆ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಅನ್ನಪೂರ್ಣಾ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು. ತಮ್ಮ ವೃತ್ತಿ ಬದ್ಧತೆಯನ್ನು ಕಾಪಾಡಿಕೊಂಡು ಮಾದರಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಉತ್ಕಟ ಇಚ್ಛೆಯಂತೆ ಅನ್ನಪೂರ್ಣಾ ತಮ್ಮ ಕರ್ತವ್ಯ ನಿಭಾಯಿಸುವ ಮೂಲಕ ಜನರ ಮನಸ್ಸಿನಲ್ಲಿ ಛಾಪು ಮೂಡಿಸಿದ್ದಾರೆ

ಐದು ವರ್ಷದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹಿಡಿದು ಪಿಎಸ್ಐ ಅನ್ನಪೂರ್ಣಾ ಎನ್‌ಕೌಂಟರ್ ಮಾಡಿದ್ದು ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.