ಪಿಎಸ್‌ಐ ಸಾವು ಪ್ರಕರಣ ಸಿಬಿಐಗೆ ವಹಿಸಲ್ಲ; ಡಾ. ಜಿ.‌ ಪರಮೇಶ್ವರ

| Published : Aug 08 2024, 01:43 AM IST

ಪಿಎಸ್‌ಐ ಸಾವು ಪ್ರಕರಣ ಸಿಬಿಐಗೆ ವಹಿಸಲ್ಲ; ಡಾ. ಜಿ.‌ ಪರಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಈಗಗಾಲೇ ಸಿಐಡಿ ತನಿಖೆ ನಡೆಸುತ್ತಿದ್ದು, ಸಿಬಿಐಗೆ ಕೊಡುವ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಅದರ ಅಗತ್ಯವಿಲ್ಲ.

ಪರಶುರಾಮ ಪತ್ನಿಗೆ ವಿದ್ಯಾರ್ಹತೆಗೆ ತಕ್ಕ ಹುದ್ದೆ

ಮನೆಯವರ ಕೋರಿಕೆ ಬಗ್ಗೆ ಸಿಎಂ ಜೊತೆ ಚರ್ಚೆ

ಪಿಎಸ್‌ಐ ಕುಟುಂಬಕ್ಕೆ ₹೫೦ ಲಕ್ಷ ವಿಶೇಷ ಪರಿಹಾರ

ಸೋಮನಾಳ ಗ್ರಾಮಕ್ಕೆ ಭೇಟಿ ನೀಡಿ, ಪರಶುರಾಮ ಕುಟುಂಬದವರಿಗೆ ಸಾಂತ್ವನ ಹೇಳಿದ ಗೃಹ ಸಚಿವ

ಕನ್ನಡಪ್ರಭ ವಾರ್ತೆ ಕೊಪ್ಪಳ

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಈಗಗಾಲೇ ಸಿಐಡಿ ತನಿಖೆ ನಡೆಸುತ್ತಿದ್ದು, ಸಿಬಿಐಗೆ ಕೊಡುವ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಅದರ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಭೇಟಿ ನೀಡಿ, ಮೃತ ಪಿಎಸ್‌ಐ ಪರಶುರಾಮ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಿಐಡಿ ತನಿಖೆ ನಡೆಯುತ್ತದೆ. ಅದರ ವರದಿಯನ್ನಾಧರಿಸಿ ಕ್ರಮವಾಗುತ್ತದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಹಾಗೊಂದು ವೇಳೆ ತನಿಖೆಯ ಬಗ್ಗೆ ಕುಟಂಬದವರಿಗೆ ಮನವರಿಕೆಯಾಗದಿದ್ದರೆ ಮುಂದೆ ತೀರ್ಮಾನಿಸದರಾಯಿತು. ಈಗಂತೂ ನಾವು ಸಿಬಿಐಗೆ ಕೊಡುವುದಿಲ್ಲ ಎಂದು ಖಡಕ್ ಆಗಿಯೇ ಹೇಳಿದರು.

ಬಿಜೆಪಿಯವರು ಏನು ಬೇಕಾದರೂ ಹೇಳಿಕೊಳ್ಳಲಿ, ಈ ಹಿಂದೆ ಗೃಹ ಸಚಿವರಾಗಿದ್ದರಲ್ಲ ಆರ್. ಅಶೋಕ, ಬಸವರಾಜ ಬೊಮ್ಮಾಯಿ ಮತ್ತತಿರರು. ಆಗ ಸಿಐಡಿ ಸರಿಯಾಗಿಯೇ ಇತ್ತಾ. ಈಗ ಕಾಂಗ್ರೆಸ್ ಸರ್ಕಾರ ಬಂದಾಗ ಅದು ಕೆಟ್ಟ ಹೋಗಿದೆಯಾ ಎಂದು ಪ್ರಶ್ನೆ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಬಿಐಯನ್ನು ಇದೇ ಬಿಜೆಪಿಯವರು ಚೋರ್ ಬಚಾವೋ ಸಂಸ್ಥೆ ಎಂದಿದ್ದರು. ಈಗ ಅದೆಲ್ಲವೂ ನೆನಪಿಲ್ಲವೇ, ಬಿಜೆಪಿಯವರನ್ನೇ ಕೇಳಿ ಎಂದರು.

ತತ್ಸಮಾನ ಹುದ್ದೆ:

ಪಿಎಸ್‌ಐ ಪರಶುರಾಮ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದ. ಆತನ ಸಾವು ನಮಗೆ ನೋವು ತಂದಿದೆ. ಅದರಲ್ಲೂ ನಮ್ಮ ಇಲಾಖೆಯಲ್ಲಿಯೇ ಇಂಥ ಘಟನೆ ನಡೆದಿರುವುದು ಘಾಸಿವುಂಟು ಮಾಡಿದೆ. ಹೀಗಾಗಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆಯಾದರೂ ಅದನ್ನು ಭರಿಸಿಕೊಡುವ ಶಕ್ತಿ ಯಾರಿಗೂ ಇಲ್ಲ.

ದಲಿತ ಸಮುದಾಯದಿಂದ ಕಷ್ಟಪಟ್ಟು ಮೇಲೆ ಬಂದಿದ್ದ ಪರಶುರಾಮನ ಸಾವು ನ್ಯಾಯವಲ್ಲ. ಆದರೆ, ಈಗಲೇ ನಾವು ಏನು ಎಂದು ಹೇಳಲು ಆಗುವುದಿಲ್ಲ. ಇನ್ನು ಎಫ್ ಎಸ್ ಎಲ್ ವರದಿಯೂ ಬಂದಿಲ್ಲ ಮತ್ತು ಪ್ರಯೋಗಾಲಯದ ವಿವಿಧ ವರದಿಗಳು ಬಂದಿಲ್ಲ. ಅದೆಲ್ಲವನ್ನು ಸಿಐಡಿಯವರು ನೋಡಿಕೊಳ್ಳುತ್ತಾರೆ. ಆದರೆ, ಆ ಕುಟುಂಬಕ್ಕೆ ಆಗಿರುವ ನೋವು ಅಷ್ಟಿಷ್ಟಲ್ಲ ಎಂದರು.

ಈ ಕಾರಣಕ್ಕಾಗಿಯೇ ನಾವು ಅವರ ಪತ್ನಿಗೆ ಸರ್ಕಾರಿ ಹುದ್ದೆಯನ್ನು ನೀಡಲು ಸಿದ್ಧರಿದ್ದೇವೆ. ಅವರ ಪತ್ನಿ ಬಿಇ ಎಲೆಕ್ಟ್ರಿಕಲ್ ಆಗಿರುವುದರಿಂದ ರಾಯಚೂರು ಕೃಷಿ ವಿವಿಯಲ್ಲಿ ಅಥವಾ ಜೆಸ್ಕಾಂನಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ಕೋರಿದ್ದಾರೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚೆ ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಬೇರೆ ಇಲಾಖೆಯ ಹುದ್ದೆಯಾದರೆ ಅದನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಂದರು.

ಆದರೆ, ಗೃಹ ಇಲಾಖೆಯಲ್ಲಿ ಅವರ ಪತಿಯ ತತ್ಸಮಾನ ಹುದ್ದೆ ನೀಡುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ, ಕುಟುಂಬದವರ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಹುದ್ದೆ ನೀಡಲಾಗುವುದು ಎಂದರು.

₹50 ಲಕ್ಷ ಪರಿಹಾರ:

ಅವರ ಕುಟುಂಬಕ್ಕೆ ಸರ್ಕಾರದಿಂದ ₹50 ಲಕ್ಷ ವಿಶೇಷ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಶೀಘ್ರದಲ್ಲಿಯೇ ಅದನ್ನು ನೀಡಲಾಗುವುದು. ಉಳಿದಂತೆ ಸರ್ಕಾರದ ನಿಯಮಾನುಸಾರ ಇರುವ ಪರಿಹಾರಗಳು ದೊರೆಯುತ್ತವೆ ಎಂದರು.

ಬಂಧಿಸಲು ಆಗಲ್ಲ:

ಪ್ರಕರಣ ದಾಖಲಾದ ತಕ್ಷಣ ಅಥವಾ ಆರೋಪ ಬಂದಾಕ್ಷಣ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಆರೋಪ ಸಾಬೀತಾಗದ ಹೊರತು ಬಂಧಿಸಲು ಆಗುವುದಿಲ್ಲ. ಅವರ ಕುಟುಂಬದವರು ಶಾಸಕ ಮತ್ತು ಅವರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಸಿಐಡಿ ತನಿಖೆ ಮಾಡುತ್ತಿದ್ದು, ಅದು ಅಗತ್ಯ ಕ್ರಮವಹಿಸುತ್ತದೆ ಎಂದರು.ಗೌಪ್ಯ ಮಾತುಕತೆ:

ಸೋಮನಾಳ ಗ್ರಾಮದಲ್ಲಿ ಪಿಎಸ್‌ಐ ಪರಶುರಾಮ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ ಕುಟುಂಬದವರೊಂದಿಗೆ ಬಾಗಿಲು ಹಾಕಿಕೊಂಡು ಮಾತುಕತೆ ನಡೆಸಿದ್ದು ಟೀಕೆಗೆ ಗುರಿಯಾಯಿತು.

ಮಾಧ್ಯಮದವರು ಸೇರಿದಂತೆ ಎಲ್ಲರನ್ನೂ ಹೊರಗಿಟ್ಟು, ಕೆಲವೇ ಕೆಲವರನ್ನೊಳಗೊಂಡು ಮಾತುಕತೆ ನಡೆಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಪ್ರಸಾದ ಅಬ್ಬಯ್ಯ ಇದ್ದರು.