ಸಾರಾಂಶ
- 6512 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಸುಗಮ ಪರೀಕ್ಷೆಗೆ ಅಧಿಕಾರಿಗಳು ಶ್ರಮಿಸಲಿ: ಜಿಲ್ಲಾಧಿಕಾರಿ ತಾಕೀತು
- - - ಕನ್ನಡಪ್ರಭ ವಾರ್ತೆ ದಾವಣಗೆರೆಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ.3ರಂದು ಪಿಎಸ್‌ಐ ಪರೀಕ್ಷೆ ನಡೆಯಲಿದೆ. ದಾವಣಗೆರೆ ನಗರದ 11 ಕೇಂದ್ರಗಳಲ್ಲಿ 6512 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ದೂರು, ಅಕ್ರಮಗಳು ನಡೆಯದಿರಲು ಅಧಿಕಾರಿಗಳು ಸೂಕ್ತ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷಾ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅ.3ರಂದು ಪಿಎಸ್‌ಐ ಹುದ್ದೆಗಳ ಆಯ್ಕೆಗೆ 2 ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ಅನಂತರ ಮಧ್ಯಾಹ್ನ 12.30 ರಿಂದ 2 ಗಂಟೆವರೆಗೆ 2ನೇ ಅವಧಿಯ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸುವ ಹಿನ್ನೆಲೆ ಅಭ್ಯರ್ಥಿಗಳು ಕನಿಷ್ಠ 2 ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಬೆಳಗ್ಗೆ 9.45 ಗಂಟೆ ನಂತರ ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣ ಪ್ರವೇಶಿಸಲು ಅನುಮತಿ ಇಲ್ಲ ಎಂದು ತಿಳಿಸಿದರು.
ಮೊದಲನೇ ಪತ್ರಿಕೆ ನಂತರ 2ನೇ ಪತ್ರಿಕೆ ಪ್ರಾರಂಭ ಆಗುವ ಮೊದಲು ಇರುವ 30 ನಿಮಿಷಗಳ ಕಾಲಾವಧಿಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಹೋಗಲು ಅನುಮತಿ ಇಲ್ಲ. ಅಭ್ಯರ್ಥಿಗಳು ತಮ್ಮೊಡನೆ ವೈದ್ಯಕೀಯ ಔಷಧಿ, ಮಾತ್ರೆಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು.ತಪಾಸಣೆ ಕಡ್ಡಾಯ:
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಆವರಣ ಪ್ರವೇಶಿಸಿದ ತಕ್ಷಣ, ಪೆಂಡಾಲಿನಲ್ಲಿ ಅವರು ತರುವ ವಸ್ತುಗಳನ್ನು ಇರಿಸಿಕೊಳ್ಳಲು ಮತ್ತು ತಪಾಸಣೆಗೆ ಒಳಗಾಗಲು ವ್ಯವಸ್ಥೆ ಮಾಡಬೇಕು. ಪರೀಕ್ಷೆ ಮುಗಿದ ನಂತರವೇ ಅವರವರ ವಸ್ತುಗಳನ್ನು ಮರಳಿ ಪಡೆಯಬೇಕು. ವಿರಾಮದ ಸಮಯದಲ್ಲಿ ಪ್ರತಿ ಅಭ್ಯರ್ಥಿಗಳಿಗೆ ಬಾಳೆಹಣ್ಣು ಮತ್ತು ಬಿಸ್ಕತ್ತು ಪ್ಯಾಕನ್ನು ಸರಬರಾಜು ಮಾಡಬೇಕು. ಪರೀಕ್ಷೆಯ ಕರ್ತವ್ಯಕ್ಕಾಗಿ ಒಬ್ಬ ಸ್ಕ್ವಾಡ್, ಒಬ್ಬ ವೀಕ್ಷಕ ಮತ್ತು ಒಬ್ಬ ಕಸ್ಟಡಿಯನ್‌ರನ್ನು ಗೊತ್ತುಪಡಿಸಲಾಗಿದೆ. ವಿರಾಮದ ವೇಳೆಯಲ್ಲಿಯೂ ಕೊಠಡಿ ಮೇಲ್ವಿಚಾರಕರು ಕೊಠಡಿಯಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ರಿಲೀವರ್ ಇಲ್ಲದೇ ಕೊಠಡಿ ಬಿಡುವಂತಿಲ್ಲ ಎಂದು ತಿಳಿಸಿದರು.ಎಲೆಕ್ಟ್ರಾನಿಕ್ ಡಿವೈಸ್- ಸಿಸಿ ಟಿವಿ:
ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬ ಪರೀಕ್ಷಾರ್ಥಿಯ ಕಿವಿಗಳನ್ನು ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಇ.ಎನ್.ಟಿ. ತಜ್ಞರನ್ನು ನೇಮಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಇರುವ ಬಗ್ಗೆ ಅಭ್ಯರ್ಥಿಯ ಮೇಲೆ ಅನುಮಾನ ಕಂಡುಬಂದರೆ ಪೊಲೀಸ್ ಅಧಿಕಾರಿಗಳ ಸಹಾಯದೊಂದಿಗೆ ಚೆಕ್ ಮಾಡಬೇಕು. ಅಲ್ಲದೇ, ಪರೀಕ್ಷಾ ಕೇಂದ್ರದ ಒಳಗೆ ನಕಲು ಮಾಡುತ್ತಿರುವ ಬಗ್ಗೆ ಅನುಮಾನ ಬಂದರೆ ತಕ್ಷಣವೇ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕರೆತಂದು ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತಪಾಸಣೆ ಮಾಡಬೇಕು ಎಂದು ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
- - -ಬಾಕ್ಸ್-1 * ಅನುಮತಿಸಲಾದ ಕೆಲ ವಸ್ತುಗಳ ವಿವರ ಪ್ರವೇಶ ಪತ್ರವನ್ನು ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇಕು. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ತರಬೇಕು. ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಅಥವಾ ಸರ್ಕಾರದ ಅಧೀನಕ್ಕೊಳಪಟ್ಟ ಖಾಸಗಿ ಕಂಪನಿಗಳು ವಿತರಿಸಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಾರ್ವಜನಿಕ ಬ್ಯಾಂಕುಗಳು, ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕ.ಭಾವಚಿತ್ರ ಸಮೇತ ನೋಂದಣಿ ಆಗಿರುವ ಸ್ವತ್ತಿನ ದಾಖಲೆ ಪತ್ರ ಅಥವಾ ಪಟ್ಟಾ ಪುಸ್ತಕ, ಭಾವಚಿತ್ರ ಸಮೇತ ಸಂಬಂಧಪಟ್ಟ ಪ್ರಾಧಿಕಾರಿಯವರು ವಿತರಿಸಿರುವ ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿತರಿಸಿರುವ ಪಿಂಚಣಿ ಪುಸ್ತಕ, ಪಿಂಚಣಿ ಮಂಜೂರಾತಿ ಆಗಿರುವ ಆದೇಶ, ಎನ್‌ಆರ್‌ಇಜಿಎಸ್‌ಯಿಂದ ನೀಡಿದ ಭಾವಚಿತ್ರವಿರುವ ಉದ್ಯೋಗ ಚೀಟಿ, ಎಲೆಕ್ಟೋರಲ್ ಪೋಟೋ ಗುರುತಿನ ಚೀಟಿ, ಭಾರತೀಯ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡ್ ಯಾವುದಾದರೂ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇಲ್ಲ ಎಂದು ವಿವರಿಸಲಾಯಿತು.
- - -ಬಾಕ್ಸ್-2 * ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ
ಪರೀಕ್ಷಾ ದಿನದಂದು ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳ ಧರಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಕಾಲರ್‌ರಹಿತ ಶರ್ಟ್ ಧರಿಸಲು ಆದ್ಯತೆ ನೀಡುವುದು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ / ಕಡಿಮೆ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟಗಳು ಇರಬಾರದು. ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ. - - -ಬಾಕ್ಸ್-3
* ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು, ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ. ಎತ್ತರವಾದ ಹಿಮ್ಮಡಿಯ ಶೂಗಳನ್ನು, ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ, ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. - - -
ಬಾಕ್ಸ್-4 * ನಿಷೇಧಿತ ವಸ್ತುಗಳ ಪಟ್ಟಿ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂಟೂಥ್ ಸಾಧನಗಳು, ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. ಪದಾರ್ಥಗಳನ್ನು ತರುವುದು, ತಿನ್ನುವುದನ್ನೂ ನಿಷೇಧಿಸಲಾಗಿದೆ. ಕುಡಿಯುವ ನೀರಿನ ಬಾಟಲಿಯೂ ತರುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ನೀರಿಗೆ ವ್ಯವಸ್ಥೆ ಇರುತ್ತದೆ. ಪೆನ್ಸಿಲ್, ಪೇಪರ್, ಎರೇಸರ್, ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ಟೋಪಿ, ಮಾಸ್ಕ್ ಧರಿಸುವಂತಿಲ್ಲ.- - - -1ಕೆಡಿವಿಜಿ42:
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಪಿಎಸ್‌ಐ ಪರೀಕ್ಷಾ ಪೂರ್ವಸಿದ್ಧತಾ ಸಭೆ ನಡೆಯಿತು.