ಚಿಕ್ಕಮಗಳೂರುಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಬಳಿ ಅಂತರಗಟ್ಟೆ ದುರ್ಗಾಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಬಂಡಿಯ ನೊಗ ಬಡಿದು ಅಜ್ಜಂಪುರ ಪಟ್ಟಣ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವೀರೇಂದ್ರ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ಬಳಿ ಅಂತರಗಟ್ಟೆ ದುರ್ಗಾಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಬಂಡಿಯ ನೊಗ ಬಡಿದು ಅಜ್ಜಂಪುರ ಪಟ್ಟಣ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವೀರೇಂದ್ರ ತೀವ್ರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.ವೀರೇಂದ್ರ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ ತೊಡಗಿದ್ದರು. ಎತ್ತಿನ ಗಾಡಿ ವೇಗ ಬರುತ್ತಿದ್ದರಿಂದ ರಸ್ತೆ ಬದಿಯಲ್ಲಿ ನಿಂತ ಭಕ್ತರು ಮತ್ತು ಸಾರ್ವಜನಿಕರನ್ನು ಹಿಂದಕ್ಕೆ ಸರಿಸುವುದಕ್ಕೆ ಮುಂದಾಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಎತ್ತಿನ ಬಂಡಿಯ ನೊಗ ಬಡಿದು ವಿರೇಂದ್ರ ಕೆಳಗೆ ಬಿದ್ದಿದ್ದಾರೆ. ಮೇಲೇಳುವ ಮೊದಲು ಮತ್ತೊಂದು ಎತ್ತಿನ ಬಂಡಿಯ ಚಕ್ರ ಮೈ ಮೇಲೆ ಹರಿದು ಹೋಗಿದೆ.
ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ತಲೆಗೆ ಪೆಟ್ಟಾಗಿದೆ. ತಕ್ಷಣ ಪಟ್ಟಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.