ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಸಂಸ್ಥೆ ನಿಯಮ ಮೀರಿ ಆಡಳಿತ ನಡೆಸುತ್ತಿದೆ. ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ನೌಕರರನ್ನು ವಿನಾಃಕಾರಣ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆರೋಪಿಸಿ ರೈತಸಂಘ ಕಾರ್ಯಕರ್ತರು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬುಧವಾರ ಕಾರ್ಖಾನೆ ಲಾಕ್‌ಔಟ್ ಮಾಡಿಸಿದರು.ರೈಲ್ವೆ ನಿಲ್ದಾಣದ ಸಮೀಪದ ಕಾರ್ಖಾನೆ ಮುಂಭಾಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ನೌಕರರು ಮತ್ತು ರೈತಸಂಘ ಕಾರ್ಯಕರ್ತರು ಎಂಆರ್ ನಿರಾಣಿ ಸಂಸ್ಥೆ ಆಡಳಿತ ಮಂಡಳಿ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ನಿರಾಣಿ ಅವರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕರೆ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿಲ್ಲ. ಕಳೆದೊಂದು ತಿಂಗಳಿನಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಅದಕ್ಕೆ ಮನ್ನಣೆ ನೀಡದೆ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.ಪಿಎಸ್ ಎಸ್ ಕೆಯಲ್ಲಿ ೪೦ ವರ್ಷಗಳ ಅವಧಿಗೆ 405 ಕೋಟಿಗೆ ಮುರುಗೇಶ್ ಆರ್.ನಿರಾಣಿ ಒಡೆತನದ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಪಡೆದಿದೆ. ಸರ್ಕಾರ ಮತ್ತು ಎಂಆರ್‌ಎನ್ ಸಂಸ್ಥೆ ನಡುವೆ ನಡೆದಿರುವ ಗುತ್ತಿಗೆ ಕರಾರನಂತೆ ನಡೆದುಕೊಳ್ಳುತ್ತಿಲ್ಲ. ಕಾರ್ಖಾನೆ ಗುತ್ತಿಗೆ ಪಡೆಯುವ ವೇಳೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಕರಾರು ಏರ್ಪಟ್ಟಿದೆ. ಆದರೆ, ಅದರಂತೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು.
ಉದ್ದೇಶ ಪೂರ್ವಕವಾಗಿ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಎಂಆರ್‌ಎನ್ ಸಂಸ್ಥೆ ಪಿಎಸ್‌ಎಸ್‌ಕೆ ಕಾರ್ಮಿಕರ ಯಾವುದೇ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಜತೆಗ ಪ್ರತಿ ಹಂಗಾಮಿನಲ್ಲೂ ನೌಕರರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಎಂಆರ್‌ಎನ್ ಸಂಸ್ಥೆ ಮುಖ್ಯಸ್ಥರೊಂದಿಗೆ ನೌಕರರ ವಿಚಾರದ ಜತೆಗೆ ಹಲವು ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನ್ಯಾಯಾಲಯ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ. ನಮ್ಮ ಮಾತಿಗೂ ಮನ್ನಣೆ ಕೊಟ್ಟಿಲ್ಲ ಎಂದರು.
ಕಾರ್ಖಾನೆ ಆಡಳಿತ ಮಂಡಳಿಯವರಿಗೆ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡು ಗುತ್ತಿಗೆ ಕರಾರಿನಂತೆ ಕಾರ್ಖಾನೆ ನಡೆಸಿಕೊಂಡು ಹೋಗಿ ಎಂದು ಸಲಹೆ ನೀಡಿದ್ದೇವು. ಆದರೆ, ಕಾರ್ಖಾನೆಯನ್ನು ಮುಚ್ಚುತ್ತೇವೆ ಹೊರತು ಯಾವುದೇ ಬೇಡಿಕೆ ಈಡೇರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಅವರು ಕಾರ್ಖಾನೆ ಮುಚ್ಚಿಕೊಂಡು ಹೋಗಲಿ, ರೈತರಿಗೆ ತೊಂದರೆಯಾಗದಂತೆ ಯಾವ ರೀತಿ ಕಾರ್ಖಾನೆ ನಡೆಸಲು ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಪಿಎಸ್‌ಎಸ್‌ಕೆ ಆಸ್ತಿ ಲಪಟಾಯಿಸುವ ಹುನ್ನಾರ:
ಎಂಆರ್‌ಎನ್ ಸಂಸ್ಥೆ ಮತ್ತು ಸರ್ಕಾರದ ನಡುವೆ ಕಾರ್ಖಾನೆ ಗುತ್ತಿಗೆ ನೀಡುವ ವಿಚಾರವಾಗಿ ಕರಾರು ಏರ್ಪಟ್ಟಿದೆ. ಅದರಂತೆ ಸಂಸ್ಥೆ ನಡೆದುಕೊಳ್ಳುತ್ತಿಲ್ಲ. ಕಾರ್ಖಾನೆಯಲ್ಲಿ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದರೂ ಅದರ ಮೂಲಕ ರೈತರಿಗೆ ಕಬ್ಬಿನ ಬಿಲ್ ಪಾವತಿಸುತ್ತಿಲ್ಲ.ತಮ್ಮದೇ ಪ್ರತೇಕ ಬ್ಯಾಂಕ್ ತೆರೆದಿದ್ದಾರೆ. ಆ ಬ್ಯಾಂಕ್‌ನಲ್ಲಿ ಖಾತೆ ತೆರೆಯದಿದ್ದರೆ ರೈತರಿಗೆ ಪೇಮೆಂಟ್ ಮಾಡುವುದಿಲ್ಲ. ಪಿಎಸ್‌ಎಸ್‌ಕೆ ಕಾರ್ಖಾನೆ ಸಹಕಾರಿ ಕ್ಷೇತ್ರದಲ್ಲಿದ್ದಾಗ ವಿವಿಧ ಬ್ಯಾಂಕ್‌ಗಳಿಂದ ನೂರಾರು ಕೋಟಿ ರು. ಸಾಲ ಪಡೆದುಕೊಳ್ಳಲಾಗಿದೆ. ಇದನ್ನು ತೀರಿಸುವ ಯಾವುದೇ ನಿರ್ಧಾರಗಳು ಎಂಆರ್‌ಎನ್ ಸಂಸ್ಥೆಯ ಮುಂದಿಲ್ಲ. ಇದರಿಂದ ಕಾರ್ಖಾನೆ ಆಸ್ತಿ ಹರಾಜಿಗೆ ಬರಬಹುದು. ಆಗ ಪಿಎಸ್‌ಎಸ್‌ಕೆ ಕಾರ್ಖಾನೆ ಆಸ್ತಿ ಖಾಸಗಿಯವರ ಪಾಲಾಗಬಹುದು ಎಂಬ ಬಹುದೊಡ್ಡ ಹುನ್ನಾರ ನಡೆದಿದೆ ಎಂದು ರೈತರು ದೂರಿದರು.
ಕಾರ್ಖಾನೆ ಕಬ್ಬು ಅರೆಯುತ್ತಿರುವುದ್ದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಅಂದ ಮಾತ್ರಕ್ಕೆ ಎಂಆರ್‌ಎನ್ ಸಂಸ್ಥೆ ಇಷ್ಟ ಬಂದಂತೆ ಆಡಳಿತ ನಡೆಸಿದರೆ ನಾವು ಸಹಿಸಲು ಸಾಧ್ಯವಿಲ್ಲ. ರೈತರು ಮತ್ತು ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ನಾವು ಕಾರ್ಖಾನೆ ಬಿಟ್ಟು ಹೊರಗೆ ಹೋಗುತ್ತೇವೆ ಎಂದಿದ್ದಾರೆ.ಅದಕ್ಕಾಗಿ ಸಹಕಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಕಾರ್ಖಾನೆಯನ್ನು ವಶಕ್ಕೆ ಪಡೆದು ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದೇವೆ. ರೈತರಿಗೆ ತೊಂದರೆಯಗದಂತೆ ಕಾರ್ಖಾನೆ ಮುಂದುವರೆಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ರೈತರು ತಿಳಿಸಿದರು.
ಈ ವೇಳೆ ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ರಾಘವ ಪ್ರಕಾಶ್, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಾಘು ಇತರರು ಇದ್ದರು.