ಕುಂದಾಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಮನೋಭಿಷ್ಟೆಯನ್ನು ದೇಶದಾದ್ಯಂತ ಪಸರಿಸುವ ಸಲುವಾಗಿ ಗ್ರಾಮೀಣ ಭಾಗವಾದ ಸುಣ್ಣಾರಿಯಲ್ಲಿ 2012 ರಲ್ಲಿ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 9 ರ್‍ಯಾಂಕ್‌ ಪಡೆದು ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ದಾಖಲಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ.ಮಹೇಶ ಹೆಗ್ಡೆ ಹೇಳಿದ್ದಾರೆ.ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಹೆಮ್ಮೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಮಾನ್ಯ ಶೆಟ್ಟಿ 597 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್‍ಯಾಂಕ್‌ ಗಳಿಸಿರುವುದಲ್ಲದೆ ಒಟ್ಟು 9 ವಿದ್ಯಾರ್ಥಿಗಳು ರ್‍ಯಾಂಕ್‌ ಪಡೆಯುವ ಮೂಲಕ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಬಂದಿದೆ. ಒಟ್ಟು 314 ವಿದ್ಯಾರ್ಥಿಗಳಲ್ಲಿ 232 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಕೇವಲ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು 252 ವಿದ್ಯಾರ್ಥಿಗಳು ಎಸ್.ಎಸ್. ಎಲ್. ಸಿ ಪರೀಕ್ಷೆಯ ಅಂಕಕ್ಕಿಂತ ದ್ವಿತೀಯ ಪಿಯುಸಿ ಅಂಕದಲ್ಲಿ ಶೇ.20ಕ್ಕಿಂತ ಹೆಚ್ಚು ಅಂಕ ಗಳಿಸಿರುವುದು ನಮ್ಮ ಎಕ್ಸಲೆಂಟ್ ಸಂಸ್ಥೆಯ ಅದ್ಭುತ ಶೈಕ್ಷಣಿಕ ಸಾಧನೆಯಾಗಿದೆ ಎಂದರು.

ಜೆಇಇ ಪರೀಕ್ಷೆಯಲ್ಲಿ 21 ವಿದ್ಯಾರ್ಥಿಗಳು 90ಕ್ಕೂ ಮಿಕ್ಕಿ ಪರ್ಸಂಟೈಲ್ ಪಡೆದಿರುವುದು, ವಾಣಿಜ್ಯ ವಿಭಾಗದ ಸಿಎ ಫೌಂಡೇಶನ್ ಬರೆದ ಒಟ್ಟು 24 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಒಂದು ಶ್ರೇಷ್ಠ ಸಾಧನೆ ಎಂದರು.

ಕಾಲೇಜಿನಲ್ಲಿ ಸಂಸ್ಕಾರಯುತ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 525ರಲ್ಲಿ 500ಕ್ಕೂ ಮಿಕ್ಕಿ ಅಂಕ ಗಳಿಸಿದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದರು.

ಪ್ರಾಂಶುಪಾಲ ನಾಗರಾಜ ಶೆಟ್ಟಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 1ರಿಂದ 5ನೇ ತರಗತಿ ವರೆಗೆ ಸಿಬಿಎಸ್‍ಸಿ ಮಾದರಿಯಲ್ಲಿ ಶಿಕ್ಷಣ ನೀಡಲಾಗುವುದು ಮತ್ತು 6ರಿಂದ 10ನೇ ತರಗತಿವರೆಗೆ ರಾಜ್ಯ ಶಿಕ್ಷಣ ಮಾದರಿಯಲ್ಲಿ ಶಿಕ್ಷಣ ನೀಡಲಾಗುವುದು ಎಂದರು.ರಾಜ್ಯಕ್ಕೆ 3ನೇ ರ್‍ಯಾಂಕ್‌ ಪಡೆದ ಮಾನ್ಯ ಶೆಟ್ಟಿ ಮಾತನಾಡಿ, ಪೋಷಕರು ನನ್ನಿಂದ ಈ ಬಾರಿ ರ್‍ಯಾಂಕ್‌ ನಿರೀಕ್ಷೆ ಮಾಡಿದ್ದರು. ಆದರೆ ಯಾವುದೇ ಒತ್ತಡ ಹಾಕುತ್ತಿರಲಿಲ್ಲ. ದಿನಕ್ಕೆ 3- 4 ಗಂಟೆ ಓದುತ್ತಿದ್ದೆ. ಕಾಲೇಜಿನ ಎಲ್ಲಾ ಉಪನ್ಯಾಸಕರು ತುಂಬಾ ರೀತಿಯಲ್ಲಿ ಸಹಕಾರ ನೀಡಿದ್ದು, ಕಾಲಕಾಲಕ್ಕೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡಿದ್ದರು. ಮುಂದೆ ಇಂಜಿನಿಯರಿಂಗ್ ಮಾಡಬೇಕೆಂಬ ಆಸೆ ಇದೆ ಎಂದರು.