ಅವರಾದಿ, ತಿಗಡಿ ಪ್ರೌಢಶಾಲೆಗಳಲ್ಲಿ ಪಿಯು ಕಾಲೇಜು: ಶಾಸಕ ಬಾಲಚಂದ್ರ ಜಾರಕಿಹೊಳಿ

| Published : Oct 10 2024, 02:18 AM IST

ಅವರಾದಿ, ತಿಗಡಿ ಪ್ರೌಢಶಾಲೆಗಳಲ್ಲಿ ಪಿಯು ಕಾಲೇಜು: ಶಾಸಕ ಬಾಲಚಂದ್ರ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ಅವರಾದಿ ಮತ್ತು ತಿಗಡಿ ಸರ್ಕಾರಿ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳಾಗಿ ಉನ್ನತಿಕರಣಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಶಾಸಕ ಮತ್ತು ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ಅವರಾದಿ ಮತ್ತು ತಿಗಡಿ ಸರ್ಕಾರಿ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳಾಗಿ ಉನ್ನತಿಕರಣಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಶಾಸಕ ಮತ್ತು ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಈ ಬಾರಿ ಚಿಕ್ಕೋಡಿ ಶೈಕ್ಷಣಿಕ ವಲಯದಲ್ಲಿ ಮೂರು ಹೊಸ ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತಿಕರಣಗೊಳಿಸಲಾಗಿದ್ದು, ಅದರಲ್ಲಿ ಮೂಡಲಗಿ ವಲಯದಲ್ಲಿ ಎರಡು ಹೊಸ ಸರ್ಕಾರಿ ಪ್ರೌಢಶಾಲೆಗಳು ಪದವಿ ಪೂರ್ವ ಮಹಾವಿದ್ಯಾಲಯಗಳಾಗಿ ಉನ್ನತಿಕರಣಗೊಂಡಿವೆ ಎಂದವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 13 ಪ್ರೌಢಶಾಲೆಗಳು ಉನ್ನತಿಕರಣಗೊಂಡಿವೆ. ಇದರಲ್ಲಿ ನಮ್ಮ ಮೂಡಲಗಿ ವಲಯದ 2 ಸೇರಿವೆ. ಇದರಿಂದ ಮೂಡಲಗಿ ವಲಯದಲ್ಲಿ ಕಾಲೇಜುಗಳ ಸಂಖ್ಯೆ 5 ರಿಂದ 7 ಕ್ಕೆ ಏರಿದೆ. ಪಿಯುಸಿ ಪ್ರಥಮ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಲಭ್ಯವಾಗಲಿದೆ. ದೂರದ ಮೂಡಲಗಿ ಮತ್ತು ಗೋಕಾಕ ಪಟ್ಟಣಗಳಿಗೆ ಶಿಕ್ಷಣಕ್ಕಾಗಿ ತೆರಳಬೇಕಿದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಅವರಾದಿ ಮತ್ತು ತಿಗಡಿ ಗ್ರಾಮಗಳ ಸುತ್ತಮುತ್ತಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಯುಸಿ ಪ್ರಥಮ ವರ್ಷದವರೆಗೆ ವ್ಯಾಸಂಗ ಮಾಡಲು ಕೇಂದ್ರದ ಶಿಕ್ಷಣ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಸಿಗಲಿದೆ ಎಂದವರು ತಿಳಿಸಿದ್ದಾರೆ.

ಈಗಾಗಲೇ ಮೂಡಲಗಿ ವಲಯದ ಕೌಜಲಗಿ, ಹಳ್ಳೂರ, ನಾಗನೂರ, ಬಳೋಬಾಳ ಮತ್ತು ವಡೇರಹಟ್ಟಿ ಗ್ರಾಮಗಳಲ್ಲಿ ಸರ್ಕಾರಿ ಪ.ಪೂ. ಮಹಾವಿದ್ಯಾಲಯಗಳಿದ್ದು, ತಿಗಡಿ ಮತ್ತು ಅವರಾದಿ ಸೇರಿ ಒಟ್ಟು 7 ಸರ್ಕಾರಿ ಪ.ಪೂ. ಮಹಾವಿದ್ಯಾಲಯಗಳನ್ನು ಮೂಡಲಗಿ ವಲಯ ಹೊಂದಿದಂತಾಗಿದೆ. ಸುಮಾರು 37 ಸರ್ಕಾರಿ ಪ್ರೌಢಶಾಲೆಗಳು ನಮ್ಮ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶಾಸಕರು ಹೇಳಿದ್ದಾರೆ.

ಅವರಾದಿ ಮತ್ತು ತಿಗಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತಕ್ಕೆ ಅನುಗುಣವಾಗಿ ಎರಡು ಪದವಿ ಪೂರ್ವ ಕಾಲೇಜು ಮಂಜೂರಾತಿಗಾಗಿ ಶ್ರಮಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಎರಡೂ ಗ್ರಾಮಗಳ ಗ್ರಾಮಸ್ಥರು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.