ಪಪೂ ಕಾಲೇಜು ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಗೆ ಚಾಲನೆ

| Published : Dec 08 2023, 01:45 AM IST

ಸಾರಾಂಶ

ಗದಗ ಗಾಂಧಿ ನಗರದ ಮಹಾತ್ಮಾ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿ ಆರಂಭವಾಗಿದೆ. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಚಾಲನೆ ನೀಡಿ ಮಾತನಾಡಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹಾಕಿಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು ಗದಗ ಜಿಲ್ಲೆ. ಇಲ್ಲಿನ ಮಕ್ಕಳಲ್ಲಿ ಹಾಕಿ ಕ್ರೀಡಾ ಆಸಕ್ತಿ ಅಧಿಕವಾಗಿರುವುದೇ ಹೆಚ್ಚು ಹಾಕಿ ಪಟುಗಳು ಹೊರಬರಲು ಸಾಧ್ಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಗದಗ

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹಾಕಿಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು ಗದಗ ಜಿಲ್ಲೆ. ಇಲ್ಲಿನ ಮಕ್ಕಳಲ್ಲಿ ಹಾಕಿ ಕ್ರೀಡಾ ಆಸಕ್ತಿ ಅಧಿಕವಾಗಿರುವುದೇ ಹೆಚ್ಚು ಹಾಕಿ ಪಟುಗಳು ಹೊರಬರಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಗಾಂಧಿ ನಗರದ ಮಹಾತ್ಮಾ ಗಾಂಧಿ ಹಾಕಿ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಗದಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಗದ ಜಿಲ್ಲಾ ಘಟಕ, ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಜಿಲ್ಲಾ ಘಟಕ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಜಿಲ್ಲಾ ಘಟಕ ಹಾಗೂ ಹನುಮಾನ್ ಬ್ಲೆಸಿಂಗ್ಸ್ ಸ್ಪೋರ್ಟ್ಸ್‌ ಕ್ಲಬ್ ಬೆಟಗೇರಿ ಇವರುಗಳ ಆಶ್ರಯದಲ್ಲಿ ಏರ್ಪಡಿಸಲಾದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅತ್ಯಾಧುನಿಕ ಟರ್ಫ್‌ ಹಾಕಿ ಕ್ರೀಡಾಂಗಣ ಇರುವುದು ನಾಲ್ಕು ಕಡೆ ಮಾತ್ರ. ಅದರಲ್ಲಿ ಗದಗ ಸಹ ಒಂದು. ಸುಸಜ್ಜಿತ ಹಾಕಿ ಮೈದಾನ ನಿರ್ಮಾಣ ಮಾಡಲಾಗಿದೆ. ಸರ್ಕಾರ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಸೌಲಭ್ಯಗಳನ್ನು ನೀಡುತ್ತಿದೆ. ಇದಕ್ಕೆ ಗದಗ ಹಾಕಿ ಕ್ರೀಡಾಂಗಣ ಉತ್ತಮ ತಾಜಾ ಉದಾಹರಣೆಗೆ ಆಗಿದೆ. ಕ್ರೀಡಾ ಕ್ಷೇತ್ರದಲ್ಲಿ ಗದಗ ಜಿಲ್ಲೆ ಉತ್ತಮ ಸಾಧನೆ ತೋರಿದೆ. ಇಂತಹ ಜಿಲ್ಲೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಕಿ ಕ್ರೀಡೆ ಆಡಲು ಆಗಮಿಸಿದ ಎಲ್ಲ ಮಕ್ಕಳು ಸಹ ಉತ್ಸಾಹ ಹಾಗೂ ಕ್ರೀಡಾ ಮನೋಭಾವನೆಯಿಂದ ಆಟ ಆಡಬೇಕು. ಆಟದಲ್ಲಿ ಸೋಲು ಗಲುವು ಸಾಮಾನ್ಯ ಎಂಬುದು ಎಲ್ಲರೂ ಅರಿತು, ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಎಂ.ಸಿ. ಕಟ್ಟಿಮನಿ, ವೈ.ಜಿ. ಗಡಾದ, ರಮೇಶ ಗಂಗಾಪುತ್ರ, ವೈ.ಬಿ. ಕೊರವರ, ಮಂಜುನಾಥ ಬಗಾಡೆ, ಅಶೋಕ ಅಂಗಡಿ, ಚಂದ್ರ ನಾಯ್ಕ, ವಾಸು ಕಲಕಂಬಿ ಇದ್ದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ ಪಿ. ಪ್ರಾಸ್ತಾವಿಕ‌ವಾಗಿ ಮಾತನಾಡಿದರು. ಪ್ರಾಚಾರ್ಯ ವೈ.ಸಿ. ಪಾಟೀಲ ಸ್ವಾಗತಿಸಿದರು. ಸೌಜನ್ಯಾ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು.