ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರಲ್ಲದವರನ್ನು ನೇಮಿಸಿಕೊಳ್ಳಲು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.ದ್ವಿತೀಯ ಪಿ.ಯು.ಸಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವರನ್ನು ಗಣತಿದಾರರಾಗಿ ಆಯ್ಕೆ ಮಾಡಿಕೊಳ್ಳಲು ಏ.22ರಂದು ಬೆಳಗ್ಗೆ 9 ಗಂಟೆಗೆ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ಅಂದಾಜು 1,000 ಜನರನ್ನು ಗಣತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಆದ್ಯತೆ:ಆಸಕ್ತರು ಕನಿಷ್ಟ ಆ್ಯಂಡ್ರಾಯ್ಡ್-12, 4 ಜಿಬಿ ರ್‍ಯಾಮ್ ಇರುವ ಮೊಬೈಲ್ ಫೋನ್ ಹೊಂದಿರಬೇಕು. ಆಯ್ಕೆಯಾದವರಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಹಾಗೂ ಗಾಂಧಿನಗರ ಕ್ಷೇತ್ರಗಳ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಗೌರವಧನ: ಮೊದಲ ಹಂತದ ಗಣತಿಗೆ 9,000 ರು. (ಕನಿಷ್ಠ 150-200 ಮನೆಗಳು) ಹಾಗೂ ಮುಂದಿನ ವರ್ಷದ ಎರಡನೇ ಹಂತದ ಗಣತಿ ಕಾರ್ಯಕ್ಕೆ 16,000 ರು. ಗೌರವ ಧನ ನೀಡಲಾಗುವುದು ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ನೌಕರರ ಗೈರು ಕಾರಣ ಈ ಕ್ರಮ
ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಾವಿರಾರು ನೌಕರರು ಗಣತಿ ಕಾರ್ಯಕ್ಕೆ ಗೈರಾಗಿದ್ದಾರೆ. ನೌಕರರಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದರೂ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಖಾಸಗಿ ಗಣತಿದಾರರ ನೇಮಿಸಿಕೊಳ್ಳಲು ಪಾಲಿಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.