ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಪದವಿ ಪೂರ್ವ ಶಿಕ್ಷಣದಲ್ಲಿ ಕಡ್ಡಾಯಗೊಳಿಸಿರುವ ‘ಪಾಠ ಆಧಾರಿತ ಮೌಲ್ಯಮಾಪನ’(ಎಲ್ಬಿಎ) ಪದ್ಧತಿ ಬಹಳಷ್ಟು ಸರ್ಕಾರಿ ಕಾಲೇಜುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.
ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ ಬೆಂಗಳೂರುದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಪದವಿ ಪೂರ್ವ ಶಿಕ್ಷಣದಲ್ಲಿ ಕಡ್ಡಾಯಗೊಳಿಸಿರುವ ‘ಪಾಠ ಆಧಾರಿತ ಮೌಲ್ಯಮಾಪನ’(ಎಲ್ಬಿಎ) ಪದ್ಧತಿ ಬಹಳಷ್ಟು ಸರ್ಕಾರಿ ಕಾಲೇಜುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.
ಶಾಲಾ ಹಂತದಲ್ಲಿ ಜಾರಿಗೆ ತರಲಾಗಿರುವ ಎಲ್ಬಿಎ ಪದ್ಧತಿಯನ್ನೇ ಪಿಯು ಕಾಲೇಜುಗಳಿಗೂ ಅವೈಜ್ಞಾನಿಕವಾಗಿ ವಿಸ್ತರಿಸಿರುವುದೇ ಇದಕ್ಕೆ ಕಾರಣ ಎನ್ನುವುದು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವಲಯದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಕೆ ಉತ್ತೇಜಿಸುವುದರೊಂದಿಗೆ ಪರೀಕ್ಷೆಯ ಫಲಿತಾಂಶ ಉತ್ತಮಗೊಳಿಸಲು 1ರಿಂದ 10ನೇ ತರಗತಿವರೆಗೆ ಇತ್ತೀಚೆಗೆ ಜಾರಿಗೊಳಿಸಿರುವ ಎಲ್ಬಿಎ ಅಂದರೆ ವಿಷಯವಾರು ಪ್ರತಿಯೊಂದು ಅಧ್ಯಾಯ ಅಥವಾ ಪಾಠ ಬೋಧನೆ ಪೂರ್ಣಗೊಂಡ ಬಳಿಕ ಒಂದು ಕಿರು ಪರೀಕ್ಷೆ ನಡೆಸಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡುವ ಪದ್ಧತಿ ಜಾರಿಗೊಳಿಸಿದೆ. ಇದು ಯಶಸ್ವಿಯಾದ ಕಾರಣ 2026-27ನೇ ಸಾಲಿನಿಂದ ಪದವಿ ಪೂರ್ವ ಶಿಕ್ಷಣಕ್ಕೂ ಇದನ್ನು ವಿಸ್ತರಿಸಲಾಗಿದೆ.
ಆದರೆ, ಶಾಲಾ ಹಂತಕ್ಕೆ ಜಾರಿಗೊಳಿಸಿರುವ ಎಲ್ಬಿಎ ಪದ್ಧತಿಯನ್ನೇ ಪಿಯು ಶಿಕ್ಷಣಕ್ಕೂ ವಿಸ್ತರಿಸಿರುವುದು ಅವೈಜ್ಞಾನಿಕ. ಈ ಪದ್ಧತಿಯನ್ನು ಸಿಬಿಎಸ್ಸಿ ಆಧಾರದ ಮೇಲೆ ಜಾರಿ ಮಾಡಲಾಗಿದೆ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 70:1 ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಇದನ್ನು ಕಲಾ ವಿಭಾಗದಲ್ಲಿ 320:1 ಮತ್ತು ವಿಜ್ಞಾನ ವಿಭಾಗದಲ್ಲಿ 160:1ರ ಅನುಪಾತ ನಿಗದಿಪಡಿಸಲಾಗಿದೆ. ಹಾಗಾಗಿ ಸಾವಿರಾರು ವಿದ್ಯಾರ್ಥಿಗಳಿರುವ ಪಿಯು ಕಾಲೇಜುಗಳಲ್ಲಿ ಎಲ್ಬಿಎ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಉಪನ್ಯಾಸಕರು.ಅಲ್ಲದೆ, ಸರ್ಕಾರಿ ಪಿಯು ಕಾಲೇಜುಗಳಲ್ಲಿ 5600ಕ್ಕೂ ಹೆಚ್ಚು ಕಾಯಂ ಉಪನ್ಯಾಸಕರ ಕೊರತೆ ಇದೆ. 12,900 ಮಂಜೂರಾದ ಹುದ್ದೆಗಳ ಪೈಕಿ ಪ್ರಸ್ತುತ 7,300 ಮಂದಿ ಉಪನ್ಯಾಸಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಖಾಲಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 1340 ಸರ್ಕಾರಿ ಪಿಯು ಕಾಲೇಜುಗಳಲ್ಲಿ 160ಕ್ಕೂ ಹೆಚ್ಚು ಕಾಲೇಜುಗಳಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇಂತಹ ಕಾಲೇಜುಗಳಲ್ಲಿ ಎನ್ಬಿಎ ಅನುಷ್ಠಾನ ಹೆಸರಿಗಷ್ಟೇ ಎನ್ನುವಂತಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಎಲ್ಬಿಎಗೆ ಹೆಚ್ಚುವರಿ 20 ಗಂಟೆ ಬೇಕು:ಪಿಯು ಕಾಲೇಜುಗಳಲ್ಲಿ ಪ್ರತಿ ಉಪನ್ಯಾಸಕರಿಗೆ ವಾರಕ್ಕೆ ಸುಮಾರು 20 ರಿಂದ 22 ಗಂಟೆ ಕಾರ್ಯಭಾರ ನಿಗದಿಪಡಿಸಲಾಗಿದೆ. ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ವಾರದಲ್ಲಿ ಎರಡು ದಿನ ತಲಾ 3 ಗಂಟೆ, ಉಳಿದ ನಾಲ್ಕು ದಿನ ತಲಾ 4 ಗಂಟೆ ಪಾಠ ಮಾಡಬೇಕು. ವಿಜ್ಞಾನ ವಿಭಾಗದಲ್ಲಿ ವಾರದಲ್ಲಿ 15 ಗಂಟೆ ಪಾಠ ಮತ್ತು ಐದು ಗಂಟೆ ಪ್ರಾಯೋಗಿಕ ತರಗತಿ ನಡೆಸಬೇಕು. ಜೊತೆಗೆ ಎನ್ಬಿಎ ಪ್ರಕ್ರಿಯೆಗೆ ಹೆಚ್ಚುವರಿ 20 ಗಂಟೆ ಸಮಯ ಬೇಕಾಗುತ್ತದೆ. ಇದನ್ನು ಎಲ್ಲಿಂದ ಸಂಯೋಜಿಸುವುದು ಎನ್ನುವುದು ಬೋಧಕರ ಮೂಲ ಪ್ರಶ್ನೆ.
-ಬಾಕ್ಸ್-ಉಪನ್ಯಾಸಕರ ಸಂಘದಿಂದ ಆಕ್ಷೇಪ
ಪಿಯು ಶಿಕ್ಷಣದಲ್ಲಿ ಈ ಪದ್ಧತಿ ಜಾರಿಗೊಳಿಸಿದ ಆರಂಭದಲ್ಲೇ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರೌಢ ಶಾಲಾ ಹಂತಕ್ಕೆ ಜಾರಿಗೊಳಿಸಿರುವ ಪದ್ಧತಿಯನ್ನೇ ಪಿಯು ಶಿಕ್ಷಣಕ್ಕೂ ಜಾರಿಗೊಳಿಸಿರುವುದು ಅವೈಜ್ಞಾನಿಕ ಎಂದು ಇಲಾಖಾ ನಿರ್ದೇಶಕರಿಗೆ ಸಂಘ ಪತ್ರ ಬರೆದಿತ್ತು. ವಿದ್ಯಾರ್ಥಿ, ಉಪನ್ಯಾಸಕರ ಅನುಪಾತ ಪ್ರಾಯೋಗಿಕ ವಿಷಯಗಳಿಗೆ 80:1, ಪ್ರಾಯೋಗಿಕವಲ್ಲದ ವಿಷಯಗಳಲ್ಲಿ 160:1ಕ್ಕೆ ಇಳಿಸಬೇಕು. ಕಾರ್ಯಾಭಾರ ಕಡಿಮೆ ಇರುವ ಉಪನ್ಯಾಸಕರನ್ನು ವಾರದಲ್ಲಿ ಮೂರು ದಿನ ಬೇರೆ ಕಾಲೇಜಿಗೆ ನಿಯೋಜಿಸುವಿಕೆ ಹಿಂಪಡೆದು ಎನ್ಬಿಎ ಜಾರಿಗೊಳಿಸಬೇಕೆಂದು ಸಂಘ ಅಧ್ಯಕ್ಷ ಎ.ಎಚ್. ನಿಂಗೇಗೌಡ ಆಗ್ರಹಿಸಿದ್ದರು.