ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕನ್ನಡ ಮೀಡಿಯಂನಲ್ಲಿ ಎಸ್‌ಎಸ್ಎಲ್‌ಸಿ ಓದಿರುವ ವಿದ್ಯಾರ್ಥಿಗಳು ಪಿಯುನಲ್ಲಿ ವಿಜ್ಞಾನ ವಿಷಯ ಕಬ್ಬಿಣದ ಕಡಲೆ ಎಂಬ ಮನೋಭಾವ ತೊಡೆದು ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪಿಯು ವಿಜ್ಞಾನ ವಿಷಯ ಕನ್ನಡದಲ್ಲಿ ಬೋಧನೆ ಮಾಡಲು ಪ್ರತ್ಯೇಕ ವಿಭಾಗ ಆರಂಭಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಿಯು ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವ ಜಿಲ್ಲೆಯ ಕೆಲವು ಪಿಯು ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಪಿಯು ವಿಜ್ಞಾನ ಕನ್ನಡ ಬೋಧನೆಗೆ ಪ್ರತ್ಯೇಕವಾಗಿ ವಿಭಾಗ ಪ್ರಾರಂಭ ಮಾಡುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ತಕ್ಷಣ ಇಂಗ್ಲಿಷ್ ಮಾಧ್ಯಮ ಅಳವಡಿಸಿಕೊಳ್ಳು ವುದು ಕಷ್ಟಸಾಧ್ಯವಾಗಲಿದೆ. ಹಾಗಾಗಿ ಜಿಲ್ಲೆಯ ಪಿಯು ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಪಿಯು ವಿಜ್ಞಾನ ಕನ್ನಡ ಬೋಧನೆಗೆ ಪ್ರತ್ಯೇಕವಾಗಿ ವಿಭಾಗ ಪ್ರಾರಂಭ ಮಾಡಿದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಪಿಯು ವಿಜ್ಞಾನ ಸಿಇಟಿ, ನೀಟ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವೇ ಪಿಯು ವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಮುದ್ರಿಸಿ ಎಲ್ಲಾ ಪಿಯು ಕಾಲೇಜುಗಳಿಗೆ ಪೂರೈಕೆ ಮಾಡಲಾಗಿದೆ. ಪಿಯು ವಿಜ್ಞಾನ ಕನ್ನಡ ಮಾಧ್ಯಮಕ್ಕೆ ಪ್ರವೇಶಾತಿ, ಪೋಷಕರ ಪ್ರತಿಕ್ರಿಯೆ, ಉಪನ್ಯಾಸಕರ ಅಭಿಪ್ರಾಯ ಆಧಾರದ ಮೇಲೆ ಮುಂದಿನ ತೀರ್ಮಾನಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇಂಗ್ಲೀಷ್ ಭಾಷಾ ವಿಷಯಗಳನ್ನು ಬೋಧನೆ ಮಾಡುವ ಶಿಕ್ಷಕರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳ್ನು ಪರಿಣಾಮಕಾರಿಯಾಗಿ ಕಲಿಸಬೇಕು. ಭಾಷೆಯ ಮೇಲೆ ಹಿಡಿತ ಸಾಧಿಸಿದರೆ ವಿದ್ಯಾರ್ಥಿಗಳು ಸುಲಭವಾಗಿ ಐಚ್ಚಿಕ ವಿಷಯ ಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಹಾಗಾಗಿ ಭಾಷಾ ವಿಷಯಗಳನ್ನು ಕಡ್ಡಾಯವಾಗಿ, ಪರಿಣಾಮಕಾರಿಯಾಗಿ ಕಲಿಸಬೇಕು ಎಂದು ತಾಕೀತು ಮಾಡಿದರು. ಪಿಯು ಫಲಿತಾಂಶದಲ್ಲಿ ಅಗ್ರಸ್ಥಾನ ಪಡೆಯುವುದಕ್ಕಿಂತ ಮುಖ್ಯವಾಗಿ ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಪಿಯು ಪಾಸಾದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ, ಕೆಎಎಸ್, ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವುದು ಮುಖ್ಯವಾಗಬೇಕು ಎಂದರು.
ಪಿಯು ವಿಜ್ಞಾನ ಕನ್ನಡದಲ್ಲಿ ಬೋಧನೆ ಕುರಿತಂತೆ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಾಧಕ-ಬಾಧಕ ಗಳ ಕುರಿತು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮಾಹಿತಿ ನೀಡಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಸಿರುದ್ದೀನ್, ಅನ್ನದ ಭಾಷೆಯಾಗಿ ಕನ್ನಡ ವೇದಿಕೆಯ ಚಿಕ್ಕಪ್ಪನಹಳ್ಳಿ ಷಣ್ಮುಖ ಸೇರಿದಂತೆ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಇದ್ದರು.