ಮಾ.೧ಕ್ಕೆ ಕೆಆರ್‌ಎಸ್‌ ಪಕ್ಷದ ಜನಜಾಗೃತಿ ಬೈಕ್ ಜಾಥಾ

| Published : Feb 28 2024, 02:33 AM IST

ಸಾರಾಂಶ

"ಕರ್ನಾಟಕಕ್ಕಾಗಿ ನಾವು " ಎನ್ನುವ ಶೀರ್ಷಿಕೆಯಲ್ಲಿ ಫೆ.೧೯ ರಿಂದ ರಾಜ್ಯದ ೩೧ ಜಿಲ್ಲೆಗಳಲ್ಲಿ ಕೆಆರೆಸ್ಸ್‌ ಪಕ್ಷವು ರಾಜ್ಯವ್ಯಾಪಿ ಜನಜಾಗೃತಿ ಬೈಕ್ ಜಾಥವನ್ನು ಹಮ್ಮಿಕೊಂಡಿದ್ದು, ಮಾ.೧ ರಂದು ಹಾಸನ ನಗರಕ್ಕೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ "ಕರ್ನಾಟಕಕ್ಕಾಗಿ ನಾವು " ಎನ್ನುವ ಶೀರ್ಷಿಕೆಯಲ್ಲಿ ಫೆ.೧೯ ರಿಂದ ರಾಜ್ಯದ ೩೧ ಜಿಲ್ಲೆಗಳಲ್ಲಿ ಕೆಆರೆಸ್ಸ್‌ ಪಕ್ಷವು ರಾಜ್ಯವ್ಯಾಪಿ ಜನಜಾಗೃತಿ ಬೈಕ್ ಜಾಥವನ್ನು ಹಮ್ಮಿಕೊಂಡಿದ್ದು, ಮಾ.೧ ರಂದು ಹಾಸನ ನಗರಕ್ಕೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನ ಜಾಗೃತಿ ಮೂಡಿಸಲು ೨೦೨೪ ಫೆ.೧೯ ರಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರ್ನಾಟಕಕ್ಕಾಗಿ ನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾವನ್ನು ಹಮ್ಮಿಕೊಂಡಿದೆ ಎಂದರು. ೨೯ ಜಿಲ್ಲಾ ಕೇಂದ್ರಗಳು ಮತ್ತು ಐವತ್ತಕ್ಕಿಂತ ಹೆಚ್ಚು ತಾಲೂಕು ಕೆಂದ್ರಗಳು ಸೇರಿದಂತೆ ಸುಮಾರು ೮೨ ಪಟ್ಟಣ ಮತ್ತು ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಸಿದೆ. ಮಾ.1 ರಂದು ಬೈಕ್ ಜಾಥಾವು ಹಾಸನಕ್ಕೆ ಆಗಮಿಸಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ಮಧ್ಯಾಹ್ನ ೩ ಕ್ಕೆ ವೇದಿಕೆ ಸಮಾರಂಭ ನಡೆಯಲಿದೆ. ಇದಾದ ಬಳಿಕ ಬೇಲೂರು, ಚನ್ನರಾಯಪಟ್ಟಣ ಮೂಲಕ ಸಾಗಲಿದೆ. ೨೦೨೪ ಮಾರ್ಚ್ ೨ ರಂದು ಶನಿವಾರ ಕೊನೆಯ ದಿನ ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಪಕ್ಷವು ಈ ಹಿಂದೆ ೨೦೨೧ ರಲ್ಲಿ ರಾಜ್ಯದ ಎಲ್ಲಾ ೩೧ ಜಿಲ್ಲೆಗಳಲ್ಲಿ “ಭ್ರಷ್ಟರೇ, ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ”ಎನ್ನುವ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ರೀತಿಯ ಹತ್ತಾರು ಯಶಸ್ವಿ ಜಾಥಾ ಮತ್ತು ಅಭಿಯಾನಗಳ ಮಾಡಲಾಗಿದೆ ಎಂದು ಹೇಳಿದರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಡಪ್ರೇಮಿ ಸೈನಿಕರನ್ನು ಮತ್ತು ಪಕ್ಷವನ್ನು ಬೆಂಬಲಿಸಿ ಎಂದು ಕೆಆರೆಸ್ಸ್‌ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ ಮತ್ತು "ನಾಡಪ್ರೇಮಿಗಳೇ ಏಳಿ, ಎದ್ದೇಳಿ! ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಿ, ಭವ್ಯ ಸಮಾಜವನ್ನು ನಿರ್ಮಿಸಿ, ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ ಎಂದು ಕರೆ ನೀಡಿದ್ದಾರೆ ಮುಂದಿನ ಒಂದೆರಡು ತಿಂಗಳಿನಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲಿಯೂ ಕೆಆರ್‌ಎಸ್‌. ಪಕ್ಷವು ಸ್ಪರ್ಧಿಸಲಿದೆ. ಹಾಗೆಯೇ ಜುಲೈ- ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಹ ಪಕ್ಷವು ಸ್ಪರ್ಧಿಸಲಿದ್ದು, ಕೆಆರ್‌ಎಸ್‌. ಪಕ್ಷದ ವತಿಯಿಂದ ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಪ್ರಾಮಾಣಿಕ ಮತ್ತು ನ್ಯಾಯಪರ ವ್ಯಕ್ತಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದೆ. ಮತ್ತು ಅಂತಹ ವ್ಯಕ್ತಿಗಳನ್ನು ಪಕ್ಷಕ್ಕೆ ಸ್ವಾಗತಿಸುವ ಮತ್ತು ಸೇರ್ಪಡೆ ಮಾಡುವ ಕಾರ್ಯಕ್ರಮಗಳನ್ನು ಸಹ ಈ ಜಾಥಾ ಸಂದರ್ಭದಲ್ಲಿ ಮಾಡಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್‌ ಪಕ್ಷದ ಉಪಾಧ್ಯಕ್ಷ ಬಿ.ಕೆ. ನಾಗರಾಜು, ಅಪ್ಪಣ್ಣ, ಆದೀಶ್, ವಿ. ರಮೇಶ್ ಬೂವನಹಳ್ಳಿ ಇತರರು ಉಪಸ್ಥಿತರಿದ್ದರು.