ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದ ಎಚ್‌ಐವಿ ಸೋಂಕನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸೋಂಕಿತರು ಇತರರಂತೆ ಸಹಜ ಜೀವನ ನಡೆಸಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಹೇಳಿದರು.
ಧಾರವಾಡ:
ಎಚ್‌ಐವಿ ಸೋಂಕಿನ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಜಾಗೃತಿಯೇ ಪ್ರಮುಖ ಅಸ್ತ್ರ. ಸೋಂಕು ಹರಡುವುದನ್ನು ತಡೆಗಟ್ಟುವ ಕ್ರಮಗಳ ಕುರಿತು ಯುವಜನರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್. ಆರ್ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತವು ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಹಾಗೂ ಎಚ್‌ಐವಿ ಹಾಗೂ ಏಡ್ಸ್ ತಡೆಗಟ್ಟಲು ಪ್ರಚಾರಾಂದೋಲನ ಅಂಗವಾಗಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಅವರು, ಎಚ್‌ಐವಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಗುರಿಗಳನ್ನು ಸಾಧಿಸಲಾಗಿದೆ. ಈ ಸೋಂಕು ಹೊಂದಿರುವವರಲ್ಲಿ ಶೇ.95ರಷ್ಟು ಜನರಿಗೆ ರೋಗನಿರ್ಣಯ ಮಾಡುವುದು ಮೊದಲ ಗುರಿ. ಸೋಂಕು ಪತ್ತೆಯಾದವರಲ್ಲಿ ಶೇ. 95ರಷ್ಟು ಜನರಿಗೆ ಚಿಕಿತ್ಸೆ ಒದಗಿಸುವುದು ಎರಡನೇ ಗುರಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಶೇ.95ರಷ್ಟು ಜನರ ದೇಹದಲ್ಲಿ ವೈರಸ್ ಪ್ರಮಾಣವನ್ನು ನಿಯಂತ್ರಿಸುವುದು ಮೂರನೇ ಗುರಿ ಎಂದರು.
ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದ ಎಚ್‌ಐವಿ ಸೋಂಕನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸೋಂಕಿತರು ಇತರರಂತೆ ಸಹಜ ಜೀವನ ನಡೆಸಬಹುದು. ಸಮಾಜದಲ್ಲಿ ಸೋಂಕು ಹೊಂದಿರುವವರನ್ನು ನೋಡುವ ದೃಷ್ಟಿಕೋನದಲ್ಲಿಯೂ ಬದಲಾವಣೆಯಾಗಬೇಕು. ಸೋಂಕಿತರನ್ನು ಕೀಳಾಗಿ ಕಾಣಬಾರದು ಎಂದ ಅವರು, ಸೋಂಕು ಹರಡುವುದನ್ನು ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.ಕೋವಿಡ್ ಸೋಂಕಿನ ನಂತರ ಇತರ ಕಾಯಿಲೆಗಳ ಕುರಿತು ಸಾರ್ವಜನಿಕರ ಗಮನ ಕಡಿಮೆಯಾಗಿರುವ ಸಾಧ್ಯತೆಯಿದೆ. ಆದರೆ, ಎಚ್‌ಐವಿ ಸೇರಿದಂತೆ ಇತರ ಕಾಯಿಲೆಗಳ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಆರೋಗ್ಯದ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದರು.
ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿಯ ಯೋಜನಾ ನಿರ್ದೇಶಕರಾದ ಪದ್ಮಾ ಬಸವಂತಪ್ಪ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ ಹಾಗೂ ಡೇಟಿಂಗ್ ಆ್ಯಪ್‌ಗಳ ಮೂಲಕ ಜನರು ಸುಲಭವಾಗಿ ಪರಸ್ಪರ ಪರಿಚಯವಾಗುತ್ತಿದ್ದು, ಸಾಂದರ್ಭಿಕ ಲೈಂಗಿಕ ಸಂಬಂಧಗಳ ಬಗ್ಗೆ ಜಾಗೃತಿ ಇರಲಿ ಎಂದರು. ಹಿಂದಿನ ದಿನಗಳಲ್ಲಿ ವಾಣಿಜ್ಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ, ಅವರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಎಚ್‌ಐವಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೀಗ, ಸಾಮಾಜಿಕ ಪರಿಸ್ಥಿತಿಯಲ್ಲಿ ವ್ಯಕ್ತಿಗಳ ನಡುವಿನ ಇಂತಹ ಸಂಪರ್ಕಗಳನ್ನು ಗುರುತಿಸುವುದು ಹಾಗೂ ಆರೋಗ್ಯ ತಪಾಸಣೆ ನಡೆಸುವುದು ಸವಾಲಿನ ಕೆಲಸ. ಎಚ್‌ಐವಿ ಹರಡುವಿಕೆ, ಅದರ ತಡೆಗಟ್ಟುವಿಕೆ ಹಾಗೂ ಸುರಕ್ಷಿತ ಲೈಂಗಿಕ ನಡವಳಿಕೆ ಕುರಿತು ಅರಿವು ಅತ್ಯಂತ ಮುಖ್ಯ ಎಂದರು.ಬೈಕ್ ರ‍್ಯಾಲಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರಳಿ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು. ಡಿಎಚ್‌ಒ ಡಾ. ಪರಶುರಾಮ ಎಫ್.ಕೆ, ಅಧಿಕಾರಿಗಳಾದ ಡಾ. ರವೀಂದ್ರ ಬೋವೇರ, ಬಿ. ಆರ್. ಪಾತ್ರೋಟ, ಡಾ. ಸಂಜಯ ಡುಮ್ಮಗೋಳ, ಡಾ. ತನುಜಾ ಕೆ.ಎನ್., ಡಾ. ಎಸ್.ಬಿ. ಕಳಸೂರಮಠ, ಡಾ. ರಾಜೇಂದ್ರ ಗೊಡ್ಡೆಮ್ಮಿ, ಡಾ. ಮಂಜುನಾಥ ಎಸ್. ಮತ್ತಿತರರು ಇದ್ದರು.