ಬೀದಿ ನಾಟಕ ದಲ್ಲಿ ಸರ್ಕಾರಿ ಸೌಲಭ್ಯದ ಜನಜಾಗೃತಿ

| Published : Feb 16 2024, 01:50 AM IST

ಸಾರಾಂಶ

ಸಮಾಜದ ಕಟ್ಟಕಡೆ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕೆಂಬ ಉದ್ದೇಶದಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ನಗರ ಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅರಿವಿಗೆ ಬೀದಿ ನಾಟಕ ಪ್ರದರ್ಶನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದ ಕಟ್ಟಕಡೆ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕೆಂಬ ಉದ್ದೇಶದಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ನಗರ ಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪಿಎಂ ಸ್ವ-ನಿಧಿ, ಸೇ ಸಮೃದ್ಧಿ ಯೋಜನೆಯಡಿ ನವ ಜೀವನ ಚಾರಿಟಲ್ ಸೇವಾ ಸಂಸ್ಥೆ ಬೀದಿ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದ ಬಡ ಜನರು ಆರ್ಥಿಕ ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆ ಜಾರಿ ಮಾಡಿದ್ದು, ಈ ಬಗ್ಗೆ ನಗರ ಸಭೆಯಿಂದ ಜಾಗೃತಿ ಮೂಡಿಸಲು ಬೀದಿ ನಾಟಕ ಏರ್ಪಡಿಸಲಾಗಿದೆ ಎಂದರು. ಬೀದಿ ಬದಿ ವ್ಯಾಪಾರಿಗಳಿಗಾಗಿ ಹಲವು ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಈ ಸಂಬಂಧ ನಗರಸಭೆ ಜಾಗೃತಿ ಮೂಡಿಸಿ, ಆರ್ಥಿಕ ಸ್ವಾವಲಂಬಿಗಳಾಗಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಸುರಕ್ಷಾ ಭೀಮಾಯೋಜನೆ, ಜೀವನ್‌ಜ್ಯೋತಿ ಭೀಮಾಯೋಜನೆ, ಒನ್ ನೇಷನ್‌ ಒನ್‌ ರೇಷನ್‌ ಕಾರ್ಡ್‌, ಜನಧನ್‌ ಯೋಜನೆ, ಶ್ರಮಯೋಗಿ ಮಾನ್‌ಧನ್‌ ಯೋಜನೆ, ಕಟ್ಟಡ ಹಾಗು ಇತರೆ ನಿರ್ಮಾಣಗಳ ಕಾರ್ಮಿಕರ ನೋಂದಣಿ, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆ ಈ ಎಂಟು ಯೋಜನೆಗಳ ಮೂಲಕ ಬಡ್ಡಿ ರಹಿತ ಸಾಲ ನೀಡಲಾಗು ತ್ತಿದ್ದು, ಸಾರ್ವಜನಿಕರು ಸಮರ್ಪಕವಾಗಿ ಸಧ್ಬಳಕೆ ಮಾಡಿಕೊಳ್ಳಬೇಕೆಂದು ವಿನಂತಿಸಿದರು. ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯುವ ಕುರಿತು ನಗರಸಭೆಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸಿ, ಆರ್ಥಿಕ ಸದೃಢವಾಗಿಸುವ ಉದ್ದೇಶ ದಿಂದ ಈ ಬೀದಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈ ಮೂಲಕ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿ ಗಳಿಗೆ ದೊರೆಯುವಂತಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ನವ ಜೀವನ ಚಾರಿಟಬಲ್ ಟ್ರಸ್ಟ್ ಮುಖಂಡರು ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. ಚಂದ್ರಶೇಖರ್ ಸ್ವಾಗತಿಸಿದರು.

15 ಕೆಸಿಕೆಎಂ 2ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಅವರು ಗುರುವಾರ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪೌರಾಯುಕ್ತ ಬಿ.ಸಿ. ಬಸವರಾಜ್‌ ಇದ್ದರು.