ಸಾರಾಂಶ
ಮುಂಗಡಪತ್ರ ಕುರಿತು ಸಮಾಲೋಚನೆ ಸಭೆ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಪಟ್ಟಣ ಪಂಚಾಯಿತಿಯ ಅಭಿವೃದ್ಧಿಯ ದೃಷ್ಟಿಯಿಂದ ಪಟ್ಟಣ ಪ್ರಮುಖರು ಮತ್ತು ಸಾರ್ವಜನಿಕರ ಸಲಹೆ ಅತೀ ಅಗತ್ಯವಾಗಿದ್ದು, ಮುಂಬರುವ ಮುಂಗಡ ಪತ್ರದ ಮಂಡನೆಗೆ ಮುಂಚಿತವಾಗಿ ಪಪಂಯ ಮಾಜಿ ಸದಸ್ಯರು ಹಾಗೂ ಪ್ರಮುಖರ ಸಲಹೆಯನ್ನು ಪರಿಗಣಿಸಿ ಮುಂದಿನ ಆರ್ಥಿಕ ವರ್ಷದ ಮುಂಗಡಪತ್ರವನ್ನು ಸಿದ್ಧಪಡಿಸಲಾಗುವುದು ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ತಿಳಿಸಿದರು.
2025-26ನೇ ಸಾಲಿನ ಮುಂಗಡ ಪತ್ರದ ಮಂಡನೆಗೆ ಪೂರ್ವಭಾವಿಯಾಗಿ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸುವ ಸಲುವಾಗಿ ಕರೆಯಲಾಗಿದ್ದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಿಂದಿನ ಸಾಲಿನಲ್ಲಿ 40 ಕೋಟಿ ರು. ಮೊತ್ತದ ಮುಂಗಡ ಪತ್ರವನ್ನು ಮಂಡಿಸಲಾಗಿತ್ತು. ಮುಂಬರುವ ವರ್ಷದಲ್ಲಿ ಪಪಂ ಸಂಪನ್ಮೂಲ ಸೇರಿದಂತೆ ಸರ್ಕಾರದ ವಿವಿಧ ಮೂಲಗಳಿಂದ ದೊರೆಯಬಹುದಾದ ಆರ್ಥಿಕ ನೆರವನ್ನು ಆಧರಿಸಿ ಮುಂಗಡ ಪತ್ರವನ್ನು ಸಿದ್ಧಪಡಿಸಬೇಕಿದೆ ಎಂದರು.
ಪಪಂಗೆ ಸ್ಥಳೀಯವಾಗಿ ವಾರ್ಷಿಕ ಸುಮಾರು 7 ಕೋಟಿ ರು. ಆದಾಯದ ನಿರೀಕ್ಷೆ ಇದೆ. ಉಳಿದಂತೆ ಎಸ್‍ಎಫ್‍ಸಿ, 15ನೇ ಹಣಕಾಸು, ಸರ್ಕಾರದ ವಿಶೇಷ ಅನುದಾನ ಮತ್ತು ಕೇಂದ್ರ ರಾಜ್ಯ ಸರ್ಕಾರಗಳಿಂದ ಬರಬಹುದಾದ ಆರ್ಥಿಕ ನೆರವನ್ನು ಆಧರಿಸಿ ಆದ್ಯತೆಯ ಮೇಲೆ ಅಭಿವೃದ್ಧಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.ಪಟ್ಟಣದ ಸ್ವಚ್ಛತೆ, ವಾಹನ ನಿಲುಗಡೆ ಮತ್ತು ಸಂಚಾರ ನಿರ್ವಹಣೆ, ಬೀದಿ ನಾಯಿ ಮತ್ತು ಗೂಳಿಗಳ ನಿಯಂತ್ರಣ ಮುಂತಾದ ವಿಚಾರಗಳು ಸಭೆಯಲ್ಲಿ ಪ್ರಮುಖವಾಗಿ ಸಾರ್ವಜನಿಕರಿಂದ ಮಂಡನೆಯಾಗಿದೆ. ಉಳಿದಂತೆ ಬೀದಿ ವ್ಯಾಪಾರಿಗಳಿಂದಾಗಿ ವಾಹನ ಸಂಚಾರ ಮತ್ತು ಪಾದಾಚಾರಿಗಳಿಗೆ ಆಗುತ್ತಿರುವ ಅಡಚಣೆಯ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ವಿಚಾರಗಳ ಬಗ್ಗೆ ಪದೇ ಪದೇ ಪಪಂ ಆಡಳಿತಕ್ಕೆ ಮನವಿ ಮಾಡಲಾಗಿದ್ದರೂ, ಸಮಸ್ಯೆ ಬಗೆಹರಿಯುತ್ತಿಲ್ಲಾ. ಈ ಬಾರಿ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.
ಹಿಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ಟಿ.ಎಲ್.ಸುರೆಶ್ ಮತ್ತು ಮಾಜಿ ಸದಸ್ಯ ಬಿ.ಎನ್. ಕೃಷ್ಣಮೂರ್ತಿ ಭಟ್, ಎಳ್ಳಮಾವಾಸ್ಯೆ ಜಾತ್ರೆಯ ಪೂರ್ವಭಾವಿ ಸಿದ್ಧತೆ ಮತ್ತು ತುಂಗಾನದಿಯ ಚಕ್ರತೀರ್ಥದಿಂದ ರಾಮಮಂಟಪದ ಕಡೆಗೆ ನಿರ್ಮಿಸಿದ ಸಂಪರ್ಕ ರಸ್ತೆಯ ಬಗ್ಗೆ ಪಪಂ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಸ್ತೆ ಅಗಲೀಕರಣದ ವೇಳೆ ಸ್ಥಳಾಂತರಿಸಲಾಗಿದ್ದ ಪಟ್ಟಣದ ಗಾಂಧಿಚೌಕದಲ್ಲಿದ್ದ ಅಶೋಕ ಸ್ಥಂಭವನ್ನು ಪುನಃ ಅದೇ ಜಾಗದಲ್ಲಿ ಸ್ಥಾಪಿಸುವಂತೆಯೂ ಆಗ್ರಹಿಸಲಾಯಿತು.ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್ ಸೇರಿದಂತೆ ಪಪಂ ಸದಸ್ಯರು, ಇತರರು ಇದ್ದರು.