ಸಾರಾಂಶ
ಪ್ರಸ್ತುತ ನಗರಾದ್ಯಂತ ಇ–ಖಾತೆ ಸದ್ದು ಜೋರಾಗಿದೆ. ಕಂದಾಯ ಬಡಾವಣೆಗಳಿಗೂ ಇ–ಖಾತೆ ಮಾಡಿಕೊಡಲಾಗುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಮಹಾನಗರ ಪಾಲಿಕೆಯ 2024- 25ನೇ ಸಾಲಿನ ಬಜೆಟ್ ಗೆ ಪೂರ್ವಭಾವಿಯಾಗಿ ಗುರುವಾರ ನಡೆದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾಜಿ ಮೇಯರ್ ಗಳು, ಸಂಘ- ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡು ನಗರಾಭಿವೃದ್ಧಿ ಸಂಬಂಧ ಹಲವು ಸಲಹೆ- ಸೂಚನೆಗಳನ್ನು ನೀಡಿದರು.ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ, ಪ್ರಸ್ತುತ ನಗರಾದ್ಯಂತ ಇ–ಖಾತೆ ಸದ್ದು ಜೋರಾಗಿದೆ. ಕಂದಾಯ ಬಡಾವಣೆಗಳಿಗೂ ಇ–ಖಾತೆ ಮಾಡಿಕೊಡಲಾಗುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಪಾಲಿಕೆಗೆ ಆದಾಯ ವೃದ್ಧಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.ಮಾಜಿ ಮೇಯರ್ ಆರ್. ಲಿಂಗಪ್ಪ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡದಿಂದ ಪಾಲಿಕೆಗೆ ಆದಾಯ ಬರುತ್ತಿಲ್ಲ. ಬಾಡಿಗೆ ಪಡೆದವರು ಉಪ ಬಾಡಿಗೆ ಕೊಟ್ಟು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಮನಗಂಡು ಪಾಲಿಕೆ ತನ್ನ ಆಸ್ತಿ ಆದಾಯ ಹೆಚ್ಚಿಸಿಕೊಳ್ಳಲು ಯೋಚಿಸಬೇಕಿದೆ. ಈಗ ವ್ಯಾಪಾರ ಮಾಡುತ್ತಿರುವವರಿಂದಲೇ ಬಾಡಿಗೆಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆಂದು ಮೀಸಲಿಟ್ಟ ಜಾಗ ಖಾಲಿ ಬಿದ್ದಿದೆ. ಫುಟ್ ಪಾತ್ ಗಳು ಕೂಡ ವ್ಯಾಪಾರ ತಾಣವಾಗಿದೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಧಕ್ಕೆಯಾಗಿದೆ. ಯಾರಿಗೂ ನಷ್ಟವಾಗದಂತೆ ವ್ಯವಸ್ಥಿತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದರು. ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ ಮಾತನಾಡಿ, ತೆರಿಗೆ ಸಂಗ್ರಹಕ್ಕೆ ಮಹಿಳಾ ಸಂಘಗಳ ಬಳಕೆ ಸ್ವಾಗತಾರ್ಹ. ಕಂದಾಯ ವಸೂಲಿ ಕಟ್ಟುನಿಟ್ಟಾಗಲಿ. ಹೆಚ್ಚು ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ. ನೀರಿನ ಬಿಲ್ ಆದಷ್ಟು ಬೇಗ ವಸೂಲಿ ಆಗಬೇಕು ಎಂದರು.ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಪಾಲಿಕೆ ತನ್ನ ಹಣಕಾಸು ಪರಿಸ್ಥಿತಿ ಹೇಗಿದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಆಗ ಮಾತ್ರ ಬಜೆಟ್ ಪೂರ್ವಭಾವಿ ಸಭೆಗೆ ಅರ್ಥ ಇರುತ್ತದೆ. ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಹೇಳಿದರು. ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ಮೈಸೂರಿನಲ್ಲಿ 26 ಸಾವಿರ ಜನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, 5- 6 ಕೈಗಾರಿಕಾ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಪಾಲಿಕೆಯಿಂದ ಅರ್ಧ ಅನುದಾನ ನೀಡಿದರೆ ನಾವು ಅರ್ಧ ನೀಡಲು ಸಿದ್ಧ. ಕೈಗಾರಿಕಾ ಕೇಂದ್ರಿತ ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಮೇಯರ್ ಪಿ. ವಿಶ್ವನಾಥ್, ಪುರುಷೋತ್ತಮ್, ಮೈಸೂರು ಗ್ರಾಹಕ ಪರಿಷತ್ ಅಧ್ಯಕ್ಷ ಭಾಮಿ ಶೆಣೈ ಮೊದಲಾದವರು ಸಲಹೆ ನೀಡಿದರು.ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಸೋಮಶೇಖರ್, ಮುಖ್ಯ ಲೆಕ್ಕಾಧಿಕಾರಿ ಎಚ್.ವಿ. ಶ್ವೇತಾ ಮೊದಲಾದವರು ಇದ್ದರು.