ಹೊಸಕೋಟೆ: ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪಾಳಿಯಲ್ಲಿ ಪೊಲೀಸ್ ಗಸ್ತುವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ 112ಗೆ ಮಾಹಿತಿ ನೀಡಿ ಅಪರಾಧ ಕಡಿವಾಣಕ್ಕೆ ಸಾರ್ವಜನಿಕರು, ಕಾರ್ಮಿಕರು, ಕಾರ್ಖಾನೆ ಮಾಲೀಕರು ಸಹಕಾರ ನೀಡಬೇಕು ಎಂದು ಹೊಸಕೋಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಗೋವಿಂದ್ ಹೇಳಿದರು.

ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಮಾಲೀಕರೊಂದಿಗೆ ಹೊಸಕೋಟೆ ಪೊಲೀಸರು ಹಮ್ಮಿಕೊಂಡಿದ್ದ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳ ಮಾಲೀಕರು ಗುತ್ತಿಗೆ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಾಗ ಅವರ ಪೂರ್ವಾಪರ ಪರಿಶೀಲನೆ ಮಾಡುವುದು ಕಡ್ಡಾಯ. ಹೊರ ರಾಜ್ಯದವರು ಕೆಲಸಕ್ಕೆ ಸೇರಿದ ಮೇಲೆ ಇಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುವ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಾರ್ಖಾನೆ ಮಾಲೀಕರು ಮಾಡಿಕೊಳ್ಳಬೇಕು. ಸಿಸಿಟಿವಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಕಾರ್ಮಿಕರ ಡೇಟಾವನ್ನು ಸಂಗ್ರಹಿಸಿಡಬೇಕು. ಕಾರ್ಖಾನೆಗಳ ಸುತ್ತ ಸುರಕ್ಷತೆಗೆ ಒತ್ತು ನೀಡಬೇಕು. ರಸ್ತೆಯಲ್ಲಿ ಕಾರ್ಖಾನೆಯ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ತೊಂದರೆ ಮಾಡಬಾರದು ಎಂದ ಅವರು, ಸೌಹಾರ್ದ ವೇದಿಕೆ ಅಸ್ತಿತ್ವಕ್ಕೆ ಬಂದ ಮೇಲೆ ಇದರ ಅಧ್ಯಕ್ಷ ಕೃಷ್ಣಪ್ಪ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.

ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದ ಸೌಹಾರ್ಧ ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಹೊಸಕೋಟೆ ತಾಲೂಕು ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿ ಹೋಗುವ ಕಾರ್ಮಿಕರ ರಕ್ಷಣೆ ಹಾಗೂ ಅಪರಾಧಗಳ ನಡೆಯದಂತೆ ತಡೆಯಲು ಪೊಲೀಸ್ ಗಸ್ತು ಹೆಚ್ಚಿಸಬೇಕು. ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶ ಈ ಹಿಂದೆ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿತ್ತು. ಆನಂತರ ಹೊಸಕೋಟೆ ಪೊಲೀಸ್ ಠಾಣೆಗೆ ಈ ಪ್ರದೇಶ ಸೇರ್ಪಡೆಯಾದ ನಂತರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ಎರಡು ಕಳ್ಳತನ ಪ್ರಕರಣಗಳನ್ನು ಹೊಸಕೋಟೆ ಪೊಲೀಸರು ತನಿಖೆ ಮಾಡಿ ಕಾರ್ಖಾನೆ ಮತ್ತು ಕಾರ್ಮಿಕರಿಗೆ ರಕ್ಷಣೆ ಒದಗಿಸಿದ್ದಾರೆ. ರಾತ್ರಿ ಸಮಯದಲ್ಲಿ ಗಸ್ತು ವಾಹನ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸಿದಲ್ಲಿ ಕಾರ್ಮಿಕರು ಮುಕ್ತವಾಗಿ ಸಂಚರಿಸಲು ಹಾಗೂ ಮೊಬೈಲ್ ಕಳ್ಳತನದಂತಹ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಾಗಲಿದೆ ಎಂದರು.

ಸಭೆಯಲ್ಲಿ ವಿವಿಧ ಕಾರ್ಖಾನೆಗಳ ಮಾಲೀಕರು, ಸಿಬ್ಬಂದಿ ಹಾಜರಿದ್ದರು.

ಫೋಟೋ: 21 ಹೆಚ್‌ಎಸ್‌ಕೆ 3


ಹೊಸಕೋಟೆ ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೌಹಾರ್ದ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಪರಾಧ ಜಾಗೃತಿ ಸಭೆಯಲ್ಲಿ ಸಿಪಿಐ ಗೋವಿಂದ್ ಮಾತನಾಡಿದರು. ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಹಾಜರಿದ್ದರು.