ಸಾರಾಂಶ
ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಬಹಳ ಮುಖ್ಯವಾಗಿರುತ್ತದೆ ಎಂದು ಕಡೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಕಡೂರು
ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಬಹಳ ಮುಖ್ಯವಾಗಿರುತ್ತದೆ ಎಂದು ಕಡೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಹೇಳಿದರು.ತಾಲೂಕಿನ ಎಸ್.ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಜಿನಿಯರ್ ಎಂ.ವಿ.ಪ್ರಿಯಾಂಕ ಸುನಯ್ ವೈಯಕ್ತಿಕವಾಗಿ ನೀಡಿದ 25 ಸಾವಿರ ರುಪಾಯಿಯ ಮೌಲ್ಯದ ಟ್ರ್ಯಾಕ್ ಸೂಟ್ ಅನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಜತೆಯಲ್ಲಿ ದಾನಿಗಳು ತಮ್ಮ ಕೈಲಾದ ಸಹಕಾರ ನೀಡಿದರೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದೇ ಶಾಲೆಯ ಶಿಕ್ಷಕಿಯಾಗಿರುವ ಸುಧಾ ವಿಶ್ವನಾಥ್ ಅವರ ಮಗಳು ಪ್ರಿಯಾಂಕ ಸುನಾಯ್ ಎಂಜಿನಿಯರ್ ಪದವಿ ಮುಗಿಸಿ ಜರ್ಮಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಹುಟ್ಟೂರಿನ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ.ತನ್ನೂರಿನ ಸರ್ಕಾರಿ ಶಾಲೆ ಅಭಿವೃದ್ದಿ ಹೊಂದಬೇಕು ಎನ್ನುವ ಕಾರಣಕ್ಕೆ ವೈಯಕ್ತಿಕವಾಗಿ 25 ಸಾವಿರ ರುಪಾಯಿಯ ಟ್ರ್ಯಾಕ್‌ಸೂಟ್ ಅನ್ನು ಶಾಲೆಯ ಮಕ್ಕಳಿಗೆ ನೀಡಿದ್ದಾರೆ.ಇದು ಇತರರಿಗೆ ಮಾದರಿಯಾಗಲಿದೆ.ಇದೇ ರೀತಿ ಇನ್ನಷ್ಟು ದಾನಿಗಳು ಸರಕಾರಿ ಶಾಲೆಗಳಿಗೆ ತಮ್ಮ ಕೈಲಾದ ಸಹಾಯ ಮಾಡಲು ಮುಂದೆ ಬರಬೇಕು ಎಂದರು.ಪ್ರಿಯಾಂಕ ಸುನಾಯ್ ಅವರ ತಂದೆ ಎಂ.ಸಿ.ವಿಶ್ವನಾಥ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ.ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದಲ್ಲಿ ಶಾಲೆಗಳಲ್ಲಿ ಮತ್ತಷ್ಟು ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಬಹುದು.ಪೋಷಕರು ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಹೆಚ್ಚಿನ ಗಮನ ಕೊಡಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಎಸ್.ಬಿ.ಸುಧಾ ಮಾತನಾಡಿ, ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಹಳೆಯ ವಿದ್ಯಾರ್ಥಿಗಳ ಕೊಡುಗೆ ಬಹಳ ಅಪಾರವಾಗಿದೆ.ಹಳೆಯ ವಿದ್ಯಾರ್ಥಿಗಳು ಶಾಲೆಗೆ 4 ಲಕ್ಷ ರು.ಗೂ ಹೆಚ್ಚಿನ ಸಾಮಗ್ರಿಗಳನ್ನು ಕೊಡಿಸಿದ್ದಾರೆ ಎಂದು ತಿಳಿಸಿದರು.ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಬಿಆರ್‌ಸಿ ಬಿ.ಟಿ.ಪ್ರೇಮ್ ಕುಮಾರ್, ಸಹ ಶಿಕ್ಷಕರಾದ ಎಂ.ಆರ್. ಸುಧಾ, ಮಂಜಯ್ಯ,ಜಯಲಕ್ಷೀ,.ಕೆ.ರವಿ,ಮಲ್ಲಮ್ಮ ಇತರರು ಇದ್ದರು.