ಸಾರಾಂಶ
ರಸ್ತೆಗಳಲ್ಲಿ ಬೆಸ-ಸರಿ ಸಂಖ್ಯೆಯಲ್ಲಿ ಪಾರ್ಕಿಂಗ್ ನಿಯಮ ಅಳವಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕೊಟ್ಟೂರು: ಜನರ ಸುರಕ್ಷತೆ ದೃಷ್ಟಿಯಿಂದ ಪಿಎಸ್‌ಐ ಗೀತಾಂಜಲಿ ಶಿಂಧೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೆಸ-ಸರಿ ಸಂಖ್ಯೆಯಲ್ಲಿ ಪಾರ್ಕಿಂಗ್ ನಿಯಮ ಅಳವಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆ ಕೂಡ್ಲಿಗಿ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಏರ್ಪಡಿಸಿದ ಜನ ಸಂಪರ್ಕ ಸಭೆಯಲ್ಲಿ ಹೇಳಿದರು.ಸರ್ಕಾರಿ ಜ್ಯೂನಿಯರ್ ಕಾಲೇಜ್ ನಲ್ಲಿ ಈಗಾಗಲೇ ಸಿಸಿಟಿವಿ ಅಳವಡಿಸಿದ್ದಾರೆ. ಪಟ್ಟಣದಲ್ಲಿ ಸಿಸಿಟಿವಿ ಅಳವಡಿಕೆಗೆ ಪಪಂ ಮುಂದಾಗಬೇಕು. ಕಳ್ಳತನ, ಇತರೆ ಅಪರಾಧಗಳನ್ನು ತಡೆಯಲು ಅನುಕೂಲವಾಗುತ್ತದೆ ಎಂದು ಹೇಳಿ, ಮಟ್ಕಾ, ಜೂಜಾಟವು ಕ್ಯಾನ್ಸರ್ ಇದ್ದಂತೆ. ಇದನ್ನು ತಡೆಯುವಲ್ಲಿ ಇಲಾಖೆ ಅನೇಕ ಕ್ರಮ ಕೈಗೊಂಡಿದೆ. ಕೆಲವರನ್ನು ಗಡಿಪಾರು ಮಾಡಿದೆ ಎಂದರು.
ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಕೊಟ್ಟೂರು ಪಟ್ಟಣ ವೇಗವಾಗಿ ಬೆಳೆಯುತ್ತಿರುವುದರಿಂದ ಪಟ್ಟಣದ ವ್ಯಾಪಾರಿಗಳು ಸುರಕ್ಷತೆ ದೃಷ್ಟಿಯಿಂದ ಅಂಗಡಿ ಹಾಗೂ ಜನಸಂದಣಿ ಇರುವ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಬೇಕೆಂದರು.ದಸಸಂ ಮುಖಂಡ ಬದ್ದಿ ಮರಿಸ್ವಾಮಿ, ಪತ್ರಕರ್ತ ಉಜ್ಜಿನಿ ರುದ್ರಪ್ಪ, ರೈತ ಸಂಘದ ಭರಮ್ಮನ, ಜಯಪ್ರಕಾಶ ನಾಯ್ಕ್, ದುರುಗೇಶ್, ಕಾಂಗ್ರೆಸ್ ಮುಖಂಡ ಅಡಕೆ ಮಂಜುನಾಥ, ಕೊಟ್ರೇಶ್, ಬಸವರಾಜ್, ಶಿವಪ್ರಕಾಶ್ ಮಾತನಾಡಿದರು. ಸಭೆಯಲ್ಲಿ ನೂರಾರು ಮುಖಂಡರು ಪಾಲ್ಗೊಂಡಿದ್ದರು.