ಸಾರಾಂಶ
ಕಡೂರು, ಪಟ್ಟಣ ದಿನೇ ದಿನೇ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕಡೂರಿನ ಸಮಗ್ರ ಅಭಿವೃದ್ಧಿ ಮಾಡಲು ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕೆಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮನವಿ ಮಾಡಿದರು.
ಪುರಸಭೆಯಲ್ಲಿ ಸಂಚಾರ, ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ನಡೆದ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣ ದಿನೇ ದಿನೇ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕಡೂರಿನ ಸಮಗ್ರ ಅಭಿವೃದ್ಧಿ ಮಾಡಲು ಸಾರ್ವಜನಿಕರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕೆಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮನವಿ ಮಾಡಿದರು.
ಗುರುವಾರ ಪುರಸಭೆ ಕನಕ ಸಭಾಂಗಣದಲ್ಲಿ ಸಂಚಾರ, ಸ್ವಚ್ಛತೆ ಮತ್ತು ನಿರ್ವಹಣೆ ಕುರಿತು ಬೀದಿ ಬದಿ ವ್ಯಾಪಾರಿಗಳು, ಆಟೋ ಸಂಘಟನೆಗಳು, ಖಾಸಗಿ ಬಸ್ ಮಾಲೀಕರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನಾವು ಜೀವನ ಕಟ್ಟಿಕೊಳ್ಳುವ ಭರದಲ್ಲಿ ನಮ್ಮ ಜೀವಕ್ಕಾಗಲಿ ಇತರರ ಜೀವಕ್ಕಾಗಲಿ ಹಾನಿ ಮಾಡುವುದು ತರವಲ್ಲ. ಬೀದಿ ಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ತಳ್ಳು ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡುವುದು, ಆಟೋದವರು, ಬಸ್ಸಿನವರು ಪ್ರಯಾಣಿಕರ ಸಲುವಾಗಿ ರಸ್ತೆ ಮೇಲೆಯೇ ವಾಹನಗಳನ್ನು ನಿಲುಗಡೆ ಮಾಡುವುದು, ವ್ಯಾಪಾರ ಕೇಂದ್ರಗಳ ಬಳಿ ವಾಹನ ಗಳನ್ನು ನಿಲ್ಲಿಸಿ ನಾಗರಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಪುರಸಭೆಗೆ ಬಂದಿವೆ. ನಮ್ಮ ಪಟ್ಟಣವನ್ನು ಸುಂದರ ಮತ್ತು ಆರೋಗ್ಯಯುತ, ಸ್ವಚ್ಚ ಹಾಗೂ ಸುರಕ್ಷತೆ ದೃಷ್ಟಿಯಿಂದ ಜವಾಬ್ದಾರಿ ನಿರ್ವಹಿಸಿ, ಇಂತಹ ನಡೆಗಳಿಗೆ ಕಡಿವಾಣ ಹಾಕುವಂತೆ ಸಂಘಟನೆಗಳ ಪದಾಧಿಕಾರಿಗಳನ್ನು ಕೋರಿದರು. ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಅನೇಕ ಕ್ರಮ ಕೈಗೊಳ್ಳಲು ಪುರಸಭೆ ಮುಂದಾಗಲಿದೆ. ಬೀದಿ ಬದಿ ವ್ಯಾಪಾರಿಗಳು ಆಹಾರದ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಬಳಸಿದ ಎಣ್ಣೆಯನ್ನೇ ಉಪಯೋಗಿಸಿ ಆಹಾರ ಪದಾರ್ಥ ತಯಾರಿಸಿ ನಾಗರಿಕರ ಆರೋಗ್ಯಕ್ಕೆ ಸಂಚಕಾರ ತರುತ್ತಿದ್ದಾರೆ ಎನ್ನುವ ದೂರು ಬಂದಿವೆ. ಆಹಾರ ಇಲಾಖೆ, ಪುರಸಭೆ ಆರೋಗ್ಯ ಶಾಖೆ ಮತ್ತು ಪೊಲೀಸರ ಸಹಯೋಗದಲ್ಲಿ ಪರಿಶೀಲನೆ ನಡೆಸಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಬಹು ದಿನಗಳ ಬೇಡಿಕೆಯಾದ ಖಾಸಗಿ ಬಸ್ ನಿಲ್ದಾಣ ಆರಂಭಕ್ಕೆ ಪುರಸಭೆಗೆ ಜಾಗದ ಕೊರತೆ ಇದೆ. ಹಳೇ ಎಪಿಎಂಸಿ ಸ್ಥಳ ಪುರಸಭೆಗೆ ಹಸ್ತಾಂತರಿಸಿದರೆ ಅಲ್ಲಿ ಜನರು ಗ್ರಾಮೀಣ ಪ್ರದೇಶಗಳಿಗೆ ತೆರಳಲು ಖಾಸಗಿ ಬಸ್ ನಿಲ್ದಾಣ ಸ್ಥಾಪಿಸಲು ಕ್ರಮ ವಹಿಸುವುದಾಗಿ ಹೇಳಿದರು. ಸರ್ಕಲ್ ಇನ್‌ಸ್ಪೆಕ್ಟರ್ ಎಂ.ರಫೀಕ್ ಮಾತನಾಡಿ, ಪೊಲೀಸ್ ಇಲಾಖೆಗೆ ಸುಧಾರಣೆಯೆ ಮೊದಲ ಗುರಿ. ನಂತರವೇ ದಂಡದ ಬಗ್ಗೆ ಕ್ರಮ ವಹಿಸುತ್ತೇವೆ. ಕಡೂರು ಪಟ್ಟಣ ಗಾಂಜಾ ವ್ಯಸನಿಗಳ ತಾಣವಾಗುತ್ತಿದೆ. ಪಟ್ಟಣ ಒಂದರಲ್ಲೇ ಸುಮಾರು 2500 ವ್ಯಸನಿಗಳಿದ್ದಾರೆ. ಮಾಹಿತಿ ಇದ್ದ ಸಾರ್ವಜನಿಕರು, ಆಟೋದವರು ನಮ್ಮ ಗಮನಕ್ಕೆ ತರುವುದಿಲ್ಲ. ಬಳಸುವವರಿಗಿಂತ ಸರಬ ರಾಜು ಮಾಡುವವರನ್ನು ಮಟ್ಟಹಾಕಿ ನಿಯಂತ್ರಿಸಲು ನಿಮ್ಮ ಸಹಕಾರ ಬಹು ಮುಖ್ಯ ಎಂದರು. ಪಟ್ಟಣ ವ್ಯಾಪ್ತಿಯಲ್ಲಿ 38 ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ನಾಗರಿಕರ ಚಲನ ವಲನದ ಮಾಹಿತಿ ಲಭ್ಯವಾಗುತ್ತಿದೆ. ಅದೇ ರೀತಿ 9ನೇ ಮೈಲಿಕಲ್ಲು ಮತ್ತು ಹೋಚಿಹಳ್ಳಿ ಸರ್ಕಲ್‌ನಲ್ಲಿ ತಲಾ 4 ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ. ಜನರು ತಮ್ಮ ಮನೆಗಳ ಬಳಿಯೂ ಗುಣಮಟ್ಟದ ಸಿಸಿಟಿವಿ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು. ಪಿಎಸ್‌ಐ ಜಿ.ಆರ್. ಸರ್ಜಿತ್‌ಕುಮಾರ್ ಮಾತನಾಡಿ, ಆಟೊ, ಟ್ಯಾಕ್ಸಿ ಮತ್ತು ಖಾಸಗಿ ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಉಂಟು ಮಾಡುವವರ ವಿರುದ್ಧ ಕ್ರಮ ವಹಿಸಲಾಗುವುದು. ಮರವಂಜಿ ಸರ್ಕಲ್, ಮೋರ್, ರಿಲಯನ್ಸ್ ಮಳಿಗೆಗಳ ಬಳಿ ವಾಹನ ನಿಲುಗಡೆ ಕ್ರಮ ಬದ್ಧವಿಲ್ಲ, ಪುರಸಭೆ ರಸ್ತೆ, ಜೈನ್ ಟೆಂಪಲ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು ಕೆಲವು ಕಡೆ ಒನ್ ವೇ , ಪಾರ್ಕಿಂಗ್ ವ್ಯವಸ್ಥೆ ಮತ್ತು ದಿನ ಬಿಟ್ಟು ದಿನ ಪಾರ್ಕಿಂಗ್ ರಸ್ತೆಗಳನ್ನು ಗುರುತಿಸಲಾಗುವುದು ಎಂದರು. ಸಭೆಯಲ್ಲಿ ಪರಿಸರ ಎಂಜಿನಿಯರ್ ಶ್ರೇಯಸ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಮೇಶ್‌ನಾಯ್ಕ, ಜಕಾತಿ ವಸೂಲಿಗಾರ ಕುಮಾರ್, ಆಟೋ ಸಂಘದ ಹುಸೇನ್, ನಾಗರಾಜ್, ಮಂಜುನಾಥ್, ಕೆಎಸ್‌ಆರ್‌ಟಿಸಿ ಡಿಪೋನ ಗಿರೀಶ್, ಅನೂಪ್, ಮಹಿಳಾ ಸಂಘದ ಶ್ಯಾಮಲಾ, ಆರೋಗ್ಯ ನಿರೀಕ್ಷಕ ಶ್ರೀನಿವಾಸ ಮೂರ್ತಿ, ತಿಮ್ಮಯ್ಯ ಮತ್ತಿತರರು ಇದ್ದರು.17ಕೆಕೆಡಿಯು1.ಕಡೂರು ಪುರಸಭೆಯ ಕನಕ ಸಭಾಂಗಣದಲ್ಲಿ ಗುರುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.