ಸಾರಾಂಶ
ಸಮಾಜದಲ್ಲಿ ನಡೆಯುವ ಅಪರಾಧ ತಡೆ ಹಿಡಿಯಲು ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು.
ಅಪರಾಧ ಮಾಸಾಚಾರಣೆಯ ಅಂಗವಾಗಿ ನಡೆದ ಜಾಗೃತಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕುಷ್ಟಗಿಸಮಾಜದಲ್ಲಿ ನಡೆಯುವ ಅಪರಾಧ ತಡೆ ಹಿಡಿಯಲು ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಹೇಳಿದರು.
ಪಟ್ಟಣದಲ್ಲಿ ಅಪರಾಧ ಮಾಸಾಚಾರಣೆಯ ಅಂಗವಾಗಿ ನಡೆದ ಜಾಗೃತಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಡಿಸೆಂಬರ್ ತಿಂಗಳ ಪೂರ್ತಿಯಾಗಿ ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.ಅಪರಾಧ ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ ಆಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಈ ತಿಂಗಳಿನಲ್ಲಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವುದು, ಕರಪತ್ರಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿ, ನಗರದ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆ ಊರುಗಳಿಗೆ ತೆರಳುವಾಗ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು. ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಕಂಡು ಬರುತ್ತಿದ್ದು, ಇದನ್ನು ತಡೆಯುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಶಾಲಾ ವಿದ್ಯಾರ್ಥಿಗಳು, ಯುವಜನರು ಪೊಲೀಸರಿಗೆ ಸಹಕಾರ ನೀಡಬೇಕು. ಪೊಲೀಸರು ಜನಸ್ನೇಹಿಗಳಾಗಿ ಸದಾ ಸಾರ್ವಜನಿಕರ ಪ್ರಾಣ, ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ಶ್ರಮಿಸುತ್ತಾರೆ. ಅಪರಾಧಗಳ ತಡೆ ಮಾಡಲು ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಸಂಚರಿಸಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.