ಸಾರಾಂಶ
ದಾಬಸ್‌ಪೇಟೆ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದರೂ ನೆಲಮಂಗಲ ತಾಲೂಕಿನ ಕೆಲ ಭಾಗಗಳಲ್ಲಿ ರಾಜಕೀಯ ಮುಖಂಡರು ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಜ.16ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದೆ.ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ತಂಡ ರಚನೆ ಮಾಡಲಾಗಿದೆ. ತಾಲೂಕಿನ ಸಾರ್ವಜನಿಕ ಸ್ಥಳಗಳು, ಆಸ್ತಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಹಾಗೂ ನಾಶಪಡಿಸಿದಲ್ಲಿ ಚುನಾವಣಾ ಕಾಯ್ದೆ ಹಾಗೂ ಸಿಆರ್‌ಪಿಸಿ ಕಾಯ್ದೆಯನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್, ಚುನಾವಣಾ ಪ್ರಚಾರ ಸಾಮಗ್ರಿಗಳು ಇದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ನೆಲಮಂಗಲದ ಪ್ರಮುಖ ಸ್ಥಳಗಳಲ್ಲಿ ಪ್ರಚಾರ ಬ್ಯಾನರ್ ಗಳನ್ನು ತೆರವು ಮಾಡಿಲ್ಲ.ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫೆ.20ರಂದು ನಡೆಯಲಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಪಟ್ಟಣದಲ್ಲಿ ರಾಜಕೀಯ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಅವುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿಲ್ಲ. ಜ.16ರಿಂದ ಫೆ.23ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪೋಟೋ 1 :ಶಿವಗಂಗೆಯಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು.