ಅಪವಿತ್ರ ಮೈತ್ರಿಯನ್ನು ಸಾರ್ವಜನಿಕರು ಒಪ್ಪುವುದಿಲ್ಲ: ಸಿಎಂ

| Published : Apr 23 2024, 12:58 AM IST

ಅಪವಿತ್ರ ಮೈತ್ರಿಯನ್ನು ಸಾರ್ವಜನಿಕರು ಒಪ್ಪುವುದಿಲ್ಲ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಐದೂ ಗ್ಯಾರಂಟಿಗಳನ್ನು ಪೂರೈಸಿದ್ದು ನುಡಿದಂತೆ ನಡೆದ ಸರ್ಕಾರವಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಹಲವು ಯೋಜನೆಗಳನ್ನು ಹಾಗೂ ಗ್ಯಾರಂಟಿಗಳನ್ನು ನೀಡುವುದರ ಜೊತೆಗೆ ಮಹಿಳೆಯರಿಗೆ ಒಂದು ಲಕ್ಷದವರೆಗೆ ಪ್ರತಿ ವರ್ಷ ಮನೆ ಬಾಗಿಲಿಗೆ ಹಣ ತಲುಪಿಸುವ ಯೋಜನೆಯನ್ನು ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಹಾಸನದಲ್ಲಿ ಈ ಬಾರಿ ಶ್ರೇಯಸ್ ಪಟೇಲ್ ರ ಗೆಲುವು ನಿಶ್ಚಿತವಾಗಿದ್ದು, ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಬಾಣಾವರದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ರೋಡ್ ಶೋ ಮಾಡುವುದರ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವೇಗೌಡರು ಈ ಹಿಂದೆ ಬಿಜೆಪಿ ಪಕ್ಷವನ್ನು ದ್ವೇಷಿಸುತ್ತಾ ಕೋಮುವಾದಿ ಪಕ್ಷವೆಂದು ಜರಿಯುತ್ತಾ ಬಂದಿದ್ದು, ಇಂದು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವು ನಶಿಸಿ ಹೋಗುತ್ತಿದೆ. ತಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ, ಬಿಜೆಪಿ ಪಕ್ಷದೊಂದಿಗೆ ವಿಲೀನವನ್ನು ಮಾಡಿಕೊಂಡಿದ್ದಾರೆ, ಇವರ ಅಪವಿತ್ರ ಮೈತ್ರಿಯನ್ನು ಸಾರ್ವಜನಿಕರು ಒಪ್ಪುವುದಿಲ್ಲ ಹಾಗೂ ಈ ಬಾರಿ ಮತದಾರರು ಜೆಡಿಎಸ್ ಪಕ್ಷಕ್ಕೆ ಹಾಸನದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಅಲ್ಲದೇ, ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಐದೂ ಗ್ಯಾರಂಟಿಗಳನ್ನು ಪೂರೈಸಿದ್ದು ನುಡಿದಂತೆ ನಡೆದ ಸರ್ಕಾರವಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಹಲವು ಯೋಜನೆಗಳನ್ನು ಹಾಗೂ ಗ್ಯಾರಂಟಿಗಳನ್ನು ನೀಡುವುದರ ಜೊತೆಗೆ ಮಹಿಳೆಯರಿಗೆ ಒಂದು ಲಕ್ಷದವರೆಗೆ ಪ್ರತಿ ವರ್ಷ ಮನೆ ಬಾಗಿಲಿಗೆ ಹಣ ತಲುಪಿಸುವ ಯೋಜನೆಯನ್ನು ಕೈಗೊಂಡಿದೆ. ಅಲ್ಲದೇ, ಈಗಾಗಲೇ ಮೋದಿ ಅವರ ಸರ್ಕಾರದಲ್ಲಿ ಭಾರತವು ದಿವಾಳಿಯಾಗಿದ್ದು, ಹಿಂದುಳಿದಿದೆ. ಯಾವುದೇ ಕೆಲಸಗಳನ್ನು ಮಾಡದೇ ಕೇವಲ ಭಾಷಣ ಮಾಡಿಕೊಂಡು ತಿರುಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭಾರತದ ಮತದಾರ ಪ್ರಭುಗಳು ತಿರುಗಿಬಿದ್ದಿದ್ದು ಕಾಂಗ್ರೆಸ್ ಪರ ವಾತಾವರಣವಿದೆ, ಈ ಬಾರಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.

ಶಾಸಕ ಕೆಎಂ ಶಿವಲಿಂಗೇಗೌಡ, ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಸಿ. ಶ್ರೀನಿವಾಸ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿಳಿ ಚೌಡಯ್ಯ, ಪಟೇಲ್ ಶಿವಪ್ಪ, ಬಾಣವರ ಗ್ರಾಪಂ ಅಧ್ಯಕ್ಷೆ ವೀಣಾ ಸುರೇಶ್, ಮಾಜಿ ಅಧ್ಯಕ್ಷ ಬಿ. ಎಂ. ಜಯಣ್ಣ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಬಿ. ಆರ್. ಶ್ರೀಧರ್, ಸದಸ್ಯ ಸುರೇಶ, ಮಾಜಿ ತಾಪಂ ಸದಸ್ಯ ರವಿಶಂಕರ್ , ಲಿಂಗರಾಜು , ಟಿ. ಆರ್. ಕೃಷ್ಣಮೂರ್ತಿ ಸೇರಿ ಅಪಾರ ಪ್ರಮಾಣದ ಅಭಿಮಾನಿಗಳು ಭಾಗವಹಿಸಿದ್ದರು.