ಇ- ಕೆವೈಸಿ ಅಪ್ಡೇಟ್‌ಗಾಗಿ ಮುಗಿಬಿದ್ದ ಸಾರ್ವಜನಿಕರು

| Published : Dec 30 2023, 01:15 AM IST

ಸಾರಾಂಶ

ಇ- ಕೆವೈಸಿ ಅಪ್ಡೇಟ್ ಮಾಡಿಸಬೇಕು. ಇದರಿಂದ ಜ. 1ರ ಬಳಿಕ ಗ್ಯಾಸ್ ಖರೀದಿಯಲ್ಲಿ ಸಬ್ಸಿಡಿ ದೊರೆಯಲಿದೆ ಎಂದು ವಾಟ್ಸ್‌ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶವೊಂದು ಹರಿದಾಡುತ್ತಿದೆ.

ಕಂಪ್ಲಿ: ಅಡುಗೆ ಅನಿಲ ಸಂಪರ್ಕ ಇರುವವರು ಡಿ. 31ರ ಒಳಗಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಇ- ಕೆವೈಸಿ ಮಾಡಿಸಿದರೆ ಸಬ್ಸಿಡಿ ದೊರೆಯಲಿದೆ ಎಂಬ ವದಂತಿಯಿಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಇ- ಕೆವೈಸಿ ಅಪ್ಡೇಟ್ ಮಾಡಿಸಲು ಮುಗಿಬಿದ್ದಿರುವ ದೃಶ್ಯಗಳು ಕಂಡುಬಂದಿವೆ.

ಇಲ್ಲಿನ ಬಳ್ಳಾರಿ ರಸ್ತೆಯಲ್ಲಿರುವ ಇಂಡೇನ್ ಶರತ ಗ್ಯಾಸ್ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆವರೆಗೂ ಜನರು ಇ- ಕೆವೈಸಿ ಅಪ್ಡೇಟ್ ಮಾಡಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿರುವ ದೃಶ್ಯಗಳು ಕಂಡುಬಂದವು.

ಏನಿದು ವದಂತಿ?: 2023ರ ಡಿ. 31ರ ಒಳಗಾಗಿ ಗ್ಯಾಸ್ ಸಂಪರ್ಕವಿರುವ ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕವನ್ನು ತೆಗೆದುಕೊಂಡು ಇ- ಕೆವೈಸಿ ಅಪ್ಡೇಟ್ ಮಾಡಿಸಬೇಕು. ಇದರಿಂದ ಜ. 1ರ ಬಳಿಕ ಗ್ಯಾಸ್ ಖರೀದಿಯಲ್ಲಿ ಸಬ್ಸಿಡಿ ದೊರೆಯಲಿದೆ ಎಂದು ವಾಟ್ಸ್‌ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸಂದೇಶವೊಂದು ಹರಿದಾಡುತ್ತಿದೆ. ಇದನ್ನು ಕಂಡ ಜನರು ಇ- ಕೆವೈಸಿ ಅಪ್ಡೇಟ್ ಮಾಡಿಸಲು ಗ್ಯಾಸ್ ಏಜೆನ್ಸಿ ಕಚೇರಿಗಳ ಮುಂದೆ ಜಮಾವಣೆಗೊಂಡಿದ್ದಾರೆ.

ವದಂತಿಗೆ ಕಿವಿಗೊಡಬೇಡಿ: ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಇ- ಕೆವೈಸಿ ಅಪ್ಡೇಟ್ ಮಾಡಿಸುವುದಕ್ಕೆ ಸರ್ಕಾರ ಯಾವುದೇ ರೀತಿಯ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಅಲ್ಲದೆ ಅಧಿಕೃತವಾಗಿ ಗ್ಯಾಸ್‌ಗೆ ದೊರೆಯುವ ಸಬ್ಸಿಡಿ ವಿಚಾರವನ್ನು ಪ್ರಕಟಿಸಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು, ಸುಕಾ ಸುಮ್ಮನೇ ಗ್ಯಾಸ್ ಏಜೆನ್ಸಿ ಕಚೇರಿಗಳ ಮುಂದೆ ಜಮಾವಣೆಗೊಳ್ಳದೇ, ತಮ್ಮ ಬಿಡುವಿನ ಸಮಯದಲ್ಲಿ ಗ್ಯಾಸ್ ಕಚೇರಿಗಳಿಗೆ ತೆರಳಿ ಇ- ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಿ ಎಂದು ಆಹಾರ ನಿರೀಕ್ಷಕರಾದ ಬಿ. ವಿರುಪಾಕ್ಷಿಗೌಡ ತಿಳಿಸಿದ್ದಾರೆ.