ಸಾರಾಂಶ
ಹಾವೇರಿ: ಗೌರಿಪುತ್ರ ವಿನಾಯಕ, ವಿಘ್ನವಿನಾಶಕನಾದ ಗಣೇಶನನ್ನು ಬುಧವಾರ ವಿಜೃಂಭಣೆಯಿಂದ ಬರಮಾಡಿಕೊಂಡು ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿಸಿದ್ದು, ಸಾರ್ವಜನಿಕ ಸಮಿತಿಗಳಿಂದ ಪ್ರತಿಷ್ಠಾಪಿಸಿರುವ ನಾನಾ ರೂಪ ತಳೆದು ಬಂದಿರುವ ಗಣಪತಿ ಬಪ್ಪ ನೋಡುಗರ ಕಣ್ಮನ ಸೆಳೆಯುತ್ತಿವೆ.ನಗರದಲ್ಲಿ ಬುಧವಾರ ಬೆಳಗ್ಗೆಯಿಂದಲೇ ದೇವಸ್ಥಾನ, ಮೂರ್ತಿ ತಯಾರಕರ ಮನೆಗಳಿಂದ ಶುಭ್ರ ವಸ್ತ್ರಧಾರಿಗಳಾಗಿ, ಪಟಾಕಿ ಸಿಡಿಸಿ, ವಾದ್ಯ ವೈಭವಗಳೊಂದಿಗೆ ಗಣೇಶ ಮೂರ್ತಿಗಳನ್ನು ಮನೆಗೆ ಕರೆತರುತ್ತಿರುವ ದೃಶ್ಯಗಳು ಕಂಡುಬಂದವು.ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು, ಹಾನಗಲ್ಲ, ಸವಣೂರು, ಬ್ಯಾಡಗಿ, ಶಿಗ್ಗಾಂವಿ, ರಟ್ಟೀಹಳ್ಳಿ ಸೇರಿದಂತೆ ಹಲವಾರು ಪಟ್ಟಣಗಳ ವಿವಿಧ ಸರ್ಕಲ್‌ಗಳಲ್ಲಿ, ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಬೃಹತ್ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.ಕಳೆದ ಒಂದೆರಡು ತಿಂಗಳಿನಿಂದ ಮೂರ್ತಿ ತಯಾರಕರಿಂದ ವಿವಿಧ ಆಕೃತಿ ಪಡೆದಿದ್ದ ಗಣೇಶ ಮೂರ್ತಿಗಳಾದ ಪಂಚಮುಖಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ವಿಷ್ಣುರೂಪಿ ವಕ್ರತುಂಡ, ಹಸುವಿನ ಮೇಲೆ ಕುಳಿತ ಗಣೇಶ, ಗರುಡನ ಮೇಲೆ ಕುಳಿತಿರುವ ಗಣೇಶ, ನವಿಲಿನ ಮೇಲೆ ಕುಣಿವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ, ವೆಂಕಟೇಶ ರೂಪಿ ವಿಘ್ನೇಶ್ವರ ಮೂರ್ತಿಗಳು ಸೇರಿದಂತೆ ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.ಹಾವೇರಿ ಪ್ರಮುಖ ವೃತ್ತಗಳಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಶಾಮಿಯಾನ ಹಾಕಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಜನತೆಯ ಕಣ್ಮನ ಸೆಳೆಯುತ್ತಿವೆ. ಸ್ಥಳೀಯ ಸುಭಾಸ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಬೃಹತ್ ಗಾತ್ರದ ಹಾವೇರಿ ಕಾ ರಾಜಾ ಗಣಪ ಎಲ್ಲರ ಗಮನ ಸೆಳೆಯುತ್ತಿದೆ. ಸ್ಥಳೀಯ ವಿದ್ಯಾನಗರದ ಪಶ್ಚಿಮ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಸಿಂಹಾಸನದಲ್ಲಿ ವಿರಾಜಮಾನವಾಗಿ ಕುಳಿತಿರುವ ಗಣೇಶ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಶಿವಾಜಿ ನಗರದ ಮಾರಾಠ ಭವನದಲ್ಲಿ ನಂದಿಯ ಮೇಲೆ ಕುಳಿತ ಶಿವರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಕಣ್ಮನ ಸೆಳೆಯುತ್ತಿದೆ.
ನಗರದ ಬಸ್ ನಿಲ್ದಾಣದಲ್ಲಿ ನಂದಿ ಮೇಲೆ ಕುಳಿತಿರುವ ಗಣೇಶ ಪ್ರತಿಷ್ಠಾಪಿಸಲಾಗಿದೆ. ಶಿವಾಜಿನಗರದ ಮೂರನೇ ಕ್ರಾಸ್‌ನಲ್ಲಿ ಸಿಂಹಾಸನರೂಢ ಗಣೇಶ ಪ್ರತಿಷ್ಠಾಪಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಬಸವೇಶ್ವರ ನಗರ, ಪುರದ ಓಣಿ, ಕೆಇಬಿ ಕಚೇರಿ, ಬಸ್ತಿ ಓಣಿ, ಯಾಲಕ್ಕಿ ಓಣಿ, ನೇತಾಜಿ ನಗರ, ನಗರಸಭೆ, ಮಹಾತ್ಮ ಗಾಂಧಿ ವೃತ್ತ, ಎಲ್‌ಬಿಎಸ್ ಮಾರ್ಕೇಟ್, ಉದಯ ನಗರ, ವಿಜಯ ನಗರ, ಇಜಾರಿಲಕ್ಮಾಪೂರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶನ ವೈವಿಧ್ಯಮಯ ಮೂರ್ತಿಗಳು ನಗರದ ಜನತೆ ಬಂದು ವೀಕ್ಷಿಸುತ್ತಿದ್ದಾರೆ.