ಸಾರಾಂಶ
ರಾಘವೇಂದ್ರ ಹೆಬ್ಬಾರ
ಭಟ್ಕಳ: ತಾಲೂಕಿನಾದ್ಯಂತ ಇಂದಿನಿಂದ(ಶನಿವಾರ) ಗಣೇಶ ಚತುರ್ಥಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದ್ದು, ಸಿದ್ಧತೆ ಜೋರಾಗಿದೆ.ಮನೆಗಳಲ್ಲಿ, ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಯನ್ನು ಕೆಲವರು ಒಂದು, ಎರಡು, ಮೂರು, ಐದು, ಏಳು ದಿನಗಳವರೆಗೂ ಪೂಜಿಸಿ ನಂತರ ಧಾರ್ಮಿಕ ವಿಧಿವಿಧಾನದಂತೆ ವಿಸರ್ಜಿಸುತ್ತಾರೆ. ಗಣೇಶನ ಮೂರ್ತಿ ಸಿದ್ಧಪಡಿಸಿದ ಕಲಾಕಾರರು ಅಂತಿಮ ರೂಪ ಕೊಟ್ಟು ಮೂರ್ತಿಯನ್ನು ಗ್ರಾಹಕರಿಗೆ ಗಣೇಶ ಚತುರ್ಥಿಯ ಹಿಂದಿನ ಮತ್ತು ಅದೇ ದಿನ ಬೆಳಗ್ಗೆ ಒಪ್ಪಿಸುತ್ತಾರೆ. ತಾಲೂಕಿನಲ್ಲಿ ಗಣೇಶನ ಮೂರ್ತಿಯನ್ನು ಭಟ್ಕಳ ಮತ್ತು ಮುರ್ಡೇಶ್ವರ ಗುಡಿಗಾರ ಕುಟುಂಬದವರು, ಕಂಚುಗಾರ ಕುಟಂಬದವರು ಸಿದ್ಧಪಡಿಸುತ್ತಾರೆ. ಇವರಂತೆ ಮತ್ತಿತರ ಕೆಲ ಕಲಾಕಾರರೂ ಮೂರ್ತಿ ಸಿದ್ಧಪಡಿಸುವ ಪರಿಪಾಠ ಹೊಂದಿದ್ದಾರೆ.
125 ಕಡೆ ಪ್ರತಿಷ್ಠಾಪನೆ: ತಾಲೂಕಿನಾದ್ಯಂತ 125ಕ್ಕೂ ಹೆಚ್ಚಿನ ಕಡೆ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಕೆಲವೆಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ, ಅನ್ನಸಂತರ್ಪಣೆಯನ್ನೂ ನಡೆಸುತ್ತಿರುವುದು ಗಣೇಶೋತ್ಸವದ ವಿಜೃಂಭಣೆಗೆ ಸಾಕ್ಷಿಯಾಗಿದೆ. ವರ್ಷದಿಂದ ವರ್ಷಕ್ಕೆ ಗಣೇಶ ಚತುರ್ಥಿ ತನ್ನ ವೈಭವ ಹೆಚ್ಚಿಸಿಕೊಳ್ಳುತ್ತಿರುವುದು ಈ ಹಬ್ಬಕ್ಕೆ ಜನರು ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆನ್ನುವುದು ಸಾಕ್ಷಿ.ಮಣ್ಣಿನ ಕೊರತೆ: ಇತ್ತೀಚಿನ ವರ್ಷಗಳಲ್ಲಿ ಗಣಪತಿ ಮೂರ್ತಿ ತಯಾರಿಸಲು ಸ್ಥಳೀಯವಾಗಿ ಮಣ್ಣಿನ ಕೊರತೆ ಎದುರಾದ ಹಿನ್ನೆಲೆ ಮೂರ್ತಿ ತಯಾರಿಸುವವರು ಸಿದ್ದಾಪುರದ ಹೆಗ್ಗರಣಿಯಿಂದ ಹೆಚ್ಚಿನ ದರ ಕೊಟ್ಟು ಮಣ್ಣನ್ನು ತರಿಸಿಕೊಂಡು ಮೂರ್ತಿ ಸಿದ್ಧಪಡಿಸುತ್ತಾರೆ. ಗಣೇಶ ಚತುರ್ಥಿಗೆ ನಾಲ್ಕು ತಿಂಗಳ ಮೊದಲೇ ಮೂರ್ತಿ ಸಿದ್ಧತಾ ಕಾರ್ಯ ಆರಂಭಿಸುವ ಕಲಾಕಾರರು ಹಬ್ಬದ ಎರಡು ಮೂರು ದಿನಗಳ ಮೊದಲು ಮೂರ್ತಿಗೆ ಅಂತಿಮ ರೂಪ ನೀಡುತ್ತಾರೆ. ಗ್ರಾಹಕರ ಬೇಡಿಕೆಯಂತೆ ೫ ಇಂಚಿನಿಂದ ಆರು ಅಡಿಯವರೆಗೂ ವಿವಿಧ ಕಲಾಕೃತಿಯ ಗಣೇಶನ ಮೂರ್ತಿಯನ್ನು ಸಿದ್ಧಪಡಿಸುತ್ತಾರೆ. ಭಟ್ಕಳ ಹೂವಿನಪೇಟೆಯಲ್ಲಿರುವ ಸದಾಶಿವ ಗುಡಿಗಾರರ ಮನೆಯಲ್ಲಿ ಗಣಪತಿ ಮೂರ್ತಿಯನ್ನು ನಾಲ್ಕು ತಲೆಮಾರುಗಳಿಂದ ಸಿದ್ಧಪಡಿಸುತ್ತಲೇ ಬಂದಿದೆ.
ಅಂತಿಮ ಸ್ಪರ್ಶ: ಸದಾಶಿವ ಗುಡಿಗಾರರ ಅಜ್ಜ ಗೋವಿಂದ್ರಾಯ ಗುಡಿಗಾರರು, ತಂದೆ ನಾರಾಯಣ ಗುಡಿಗಾರರು ಸ್ವತಃ ಸದಾಶಿವ ಗುಡಿಗಾರರು ಹಾಗೂ ಅವರ ಮಗ ಅರುಣ ಗುಡಿಗಾರರು ಮೂರ್ತಿ ತಯಾರಿಕೆಯನ್ನು ಮಾಡುತ್ತಾ ಬಂದಿದ್ದಾರೆ. ಚೌತಿಗೆ ಎರಡು ದಿನಗಳ ಮೊದಲು ಮನೆ ಮಂದಿಯೆಲ್ಲಾ ಒಟ್ಟಾಗಿ ವಿವಿಧ ಕಾರ್ಯಗಳನ್ನು ಮಾಡಿ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಪ್ರೋತ್ಸಾಹಿಸಲಿ: ಗಣಪತಿ ಮೂರ್ತಿ ತಯಾರಿಕೆಯನ್ನು ನಾಲ್ಕು ತಲೆಮಾರುಗಳಿಂದ ನಮ್ಮ ಕುಟುಂಬ ಮಾಡಿಕೊಂಡು ಬರುತ್ತಿದೆ. ಇದೊಂದು ಕಷ್ಟದ ಕೆಲಸ. ಮೂರ್ತಿ ತಯಾರಿಕೆ ಸುಲಭವಲ್ಲ. ಬೇರೆ ರಾಜ್ಯದಂತೆ ನಮ್ಮ ರಾಜ್ಯದಲ್ಲೂ ಕಲಾಕಾರರಿಗೆ ಸರ್ಕಾರದಿಂದ ಸಹಾಯ ನೀಡಿ ಪ್ರೋತ್ಸಾಹಿಸಬೇಕು ಎಂದು ಗಣಪತಿ ಮೂರ್ತಿ ತಯಾರಕರಾದ ಅರುಣ ಗುಡಿಗಾರ ಆಗ್ರಹಿಸಿದರು.