ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಸಾಸಲು ಕ್ಷೇತ್ರದಲ್ಲಿ ಕಡೇ ಕಾರ್ತಿಕ ಮಾಸದ ಪೂಜೆ ಸಲ್ಲಿಸಲು ಜನಸಮೂಹ ಸಾಗರದಂತೆ ಹರಿದುಬಂದ ಪರಿಣಾಮ ದೇಗುಲದ ಆವರಣದಲ್ಲಿ ಸ್ವಚ್ಛತೆ ಮಾಯವಾಗಿತ್ತು.ಕಾರ್ತಿಕ ಮಾಸದ ಅಂಗವಾಗಿ ಭಕ್ತರು ಆಗಮಿಸಿ ತಮ್ಮಇಷ್ಟಾರ್ಥ ಈಡೇರಿಕೆಗಾಗಿ ಹರಕೆ ಕಾಣಿಕೆ ಸಮರ್ಪಿಸಿದರು. ಬೆಳಗ್ಗಿನಂದಲೇ ಸೋಮೇಶ್ವರ ಪುಷ್ಕರಿಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ಸಾಲುಗಟ್ಟಿ ನಿಂತಿದ್ದರು. ಅಧಿಕಾರಿಗಳ ಆದೇಶಕ್ಕೆ ಕಿಮ್ಮತ್ತು ನೀಡದೆ ಪುಷ್ಕರಿಣಿಯಲ್ಲಿ ಗಂಗಾ ಪೂಜೆ ಮಾಡಿದರು.
ಗಂಧದಕಡ್ಡಿ, ಹೂವು, ಬಾಳೆಹಣ್ಣು, ಕರ್ಪೂರ, ಅರಿಷಿಣ, ಕುಂಕುಮ, ತೆಂಗಿನಕಾಯಿ ಹಾಕಿದರು. ಶ್ವೇತಾವರ್ಣದ ಕೊಳದ ನೀರು ಬಣ್ಣ ಬದಲಾಯಿಸಿಕೊಂಡು ರಕ್ತವರ್ಣದಂತೆ ಪರಿವರ್ತನೆಯಾಗಿತ್ತು. ಹೆಚ್ಚಿನ ಜನಜಾತ್ರೆಯಲ್ಲಿ ಸ್ವಚ್ಛತೆ ಮಾಯವಾಗಿತ್ತು.ಕಜ್ಜಿ, ತುರುಕೆ, ಚರ್ಮವ್ಯಾಧಿ, ಸರ್ಪಸುತ್ತಿಗೆರಾಮಬಾಣದೇಗುಲ ಎಂದು ಭಕ್ತರು ನಾಗಬನದಲ್ಲಿ ವಿಶೇಷವಾಗಿ ಪೂಜಿಸಿದರು. ಹಿಂದೂ, ಮುಸ್ಲಿಮರು ಎನ್ನದೆ ಮತ, ಭೇದ ಮರೆತು ಬಾಲಾಲಯದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ವರ ದೇವರ ದರ್ಶನ ಪಡೆದರು. ಸಹೋದರಿ ಕುದುರೆಮಂಡಮ್ಮ ದೇಗುಲಕ್ಕೆ ತೆರಳಿ ದೇವಿಗೆ ಮಡಿಲಕ್ಕಿ, ಬಾಗಿನ ಅರ್ಪಿಸಿದರು.
ಶಂಭುಲಿಂಗೇಶ್ವರ ದೇಗುಲ ತಾಣದಲ್ಲಿರುವ ನಾಗಬನಕ್ಕೆ ಭಕ್ತರು ತೆರಳಿ ಹುತ್ತಕ್ಕೆ ಅರಿಷಿಣ, ಹಾಲು, ಮೊಸರುಅಭಿಷೇಕ ನೆರವೇರಿಸಿ, ಪುಷ್ಪಗಳಿಂದ ಅಲಂಕರಿಸಿದರು. ರೋಗರುಜಿನ, ಚರ್ಮವ್ಯಾಧಿ ಕಾಯಿಲೆ ಬಾರದಂತೆ ಪ್ರಾರ್ಥಿಸಿದರು.ಶಂಭುಲಿಂಗೇಶ್ವರ, ಸೋಮೇಶ್ವರ ಅನ್ನದಾಸೋಹ ಸಮಿತಿ ದಾನಿಗಳ ಸಹಾಯದಲ್ಲಿ ಅನ್ನಸಂತರ್ಪಣೆ ನೆರವೇರಿಸಿದರು. ನಾಗಬನದಲ್ಲಿ ರಾಶಿ ರಾಶಿ ಬಿದ್ದಿದ್ದ ಬಾಳೆಹಣ್ಣು, ನಾಗರಕಲ್ಲಿಗೆ ಹಾಕಲಾಗಿದ್ದ ಜೇನುತುಪ್ಪ, ಬಾಳೆಹಣ್ಣು, ಹಾಲು, ಮೊಸರು ನೆಕ್ಕಿ, ತಿನ್ನಲು ನಾಯಿಗಳ ಹಿಂಡು ಭಕ್ತರನ್ನು ಲೆಕ್ಕಿಸದೆ ನಾಗಬನಕ್ಕೆ ಲಗ್ಗೆ ಇಟ್ಟಿದ್ದವು. ನಾಯಿಗಳು ಭಕ್ತರ ಮೇಲೆ ಎಗರಿ ಬೀಳಲು ಬೊಗಳುತ್ತಿರುವುದನ್ನು ಕಂಡು ಹಲವು ಭಕ್ತರು ದೇಗುಲ ಪ್ರಾಂಗಣದಿಂದ ಹೊರ ನಡೆದರು.