ಸಾರಾಂಶ
ಹೊಸಪೇಟೆ:
ಫೆ.28 ರಿಂದ ಮಾರ್ಚ್ 2 ವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕೆ ಸ್ವತಃ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೊಸಪೇಟೆ ನಗರದ ಇಂದಿರಾ ನಗರ, ಮುಕ್ತಿಧಾಮ ಸೇರಿದಂತೆ ವಿವಿಧ ಬಡಾವಣೆಗಳಿಗೆ ತೆರಳಿ ಸಾರ್ವಜನಿಕರನ್ನು ಆಹ್ವಾನಿಸಿ, ವಿಐಪಿ(ಅತಿ ಗಣ್ಯ ವ್ಯಕ್ತಿ) ಪಾಸುಗಳನ್ನು ಬುಧವಾರ ವಿತರಿಸಿದರು.ಹಂಪಿ ಉತ್ಸವ ಎಂದರೆ ಜನರ ಉತ್ಸವ, ಜನರು ಬಂದರಷ್ಟೇ ಹಂಪಿ ಉತ್ಸವಕ್ಕೆ ಕಳೆ ಬರುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಉತ್ಸವ ನಡೆಯುವ 3 ದಿನಗಳ ಕಾಲ ಹೊಸಪೇಟೆಯಿಂದ ಹಂಪಿಗೆ ಹಾಗೂ ಕಂಪ್ಲಿ ಪಟ್ಟಣದಿಂದ ಹಂಪಿಗೆ ಉಚಿತ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಹೊಸಪೇಟೆಯಿಂದ 30 ಹಾಗೂ ಕಂಪ್ಲಿ ಪಟ್ಟಣದಿಂದ 10 ಸಾರಿಗೆ ಬಸ್‌ಗಳು ಹಂಪಿಗೆ ಸರಿತಿಯಲ್ಲಿ ಕಾರ್ಯಾಚರಣೆ ನಡೆಸಲಿವೆ. ಮೊದಲ ದಿನ ಉದ್ಘಾಟನೆ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಗ್ರಾಮಗಳಿಂದ ಹಂಪಿಗೆ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಶಾಸಕ ಎಚ್.ಆರ್. ಗವಿಯಪ್ಪ ಹಂಪಿಯ ಕೃಷ್ಣ ಮಂದಿರ ಎದುರು ಸಾರ್ವಜನಿಕರಿಗೆ ಉಚಿತ ಆಹಾರದ ವ್ಯವಸ್ಥೆ ಮಾಡಿದ್ದಾರೆ.ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸುಮಾರು 500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಧಾನ ವೇದಿಕೆ ಬಳಿ 150 ಎಕರೆ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಏಕಮುಖ ಸಂಚಾರಕ್ಕೆ ಅನುಮಾಡಿಕೊಡಲಾಗಿದ್ದು, ಕಡ್ಡಿರಾಂಪುರ ಮಾರ್ಗದಿಂದ ಹಂಪಿ ಪ್ರವೇಶ ಹಾಗೂ ಕಮಲಾಪುರ ಮಾರ್ಗದಿಂದ ಹಂಪಿಯಿಂದ ಹೊರಕ್ಕೆ ಅವಕಾಶ ನೀಡಲಾಗಿದೆ. ಉತ್ಸವದ ಸ್ಥಳದಲ್ಲಿ ಸಹಾಯವಾಣಿ ಸಾರ್ವಜನಿಕ ಉದ್ಘೋಷ ಕೇಂದ್ರ ತೆರೆಯಲಾಗಿದೆ.
ಬೇಸಿಗೆ ಹೆಚ್ಚಿರುವ ಕಾರಣ 25 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ 10 ಜಾಗದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಯಿಂದ ಕೃಷಿ, ತೋಟಗಾರಿಕೆ ಹಾಗೂ ಮತ್ಸ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಉತ್ಸವ ಆಗಮಿಸುವ ಸಾರ್ವಜನಿಕರು ಆಹಾರ ಮೇಳದಲ್ಲಿ ಭಾಗವಹಿಸಿ ತರಹೇವಾರಿ ಖಾದ್ಯಗಳನ್ನು ಸ್ವಂತ ಖರ್ಚಿನಲ್ಲಿ ಸವಿಯಬಹುದು.ಉತ್ಸವದ ಪ್ರಧಾನ ವೇದಿಕೆಯಲ್ಲಿ ಚಿತ್ರನಟರಾದ ರಮೇಶ್ ಅರವಿಂದ್, ಉಪೇಂದ್ರ, ವಿಜಯ್ ರಾಘವೇಂದ್ರ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಟಿಯರಾದ ಪ್ರೇಮಾ, ರಮ್ಯ, ರಾಗಿಣಿ, ಅನುಶ್ರೀ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗುರುಕಿರಣ್, ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ಕಿರುತೆರೆ ಹಾಗೂ ಹಿರಿತೆರೆ ಕಲಾವಿದರು ಪಾಲ್ಗೊಳ್ಳುವರು.ಸಾರ್ವಜನಿಕರು ಪೊಲೀಸರು, ಆಧಿಕಾರಿಗಳು ನೀಡುವ ಸೂಚನೆ ಪಾಲಿಸಿ, ತುಂಗಭದ್ರಾ ನದಿಯ ಅಪಾಯಕಾರಿ ಸ್ಥಳಗಳಲ್ಲಿ ನೀರಿಗೆ ಇಳಿಯದಂತೆ ಎಚ್ವರ ವಹಿಸಬೇಕು. ಹೊಸದಾಗಿ ಮದುವೆಯಾದ ಜೋಡಿಗಳು, ಚಿಕ್ಕಪುಟ್ಟ ಮಕ್ಕಳು, ಹಿರಿಯರು ಸಕುಟುಂಬ ಸಮೇತರಾಗಿ ಹಂಪಿ ಉತ್ಸವ-2025 ಸಾಕ್ಷಿಯಾಗಬಹದು. ಜಿಲ್ಲೆಯ ಎಲ್ಲ ಜನತೆಗೆ ಜಿಲ್ಲಾಧಿಕಾರಿ ಕರೆಯೋಲೆ ನೀಡಿ ಆಮಂತ್ರಿಸಿದ್ದಾರೆ.