ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ಒದಗಿಸುವುದು ಜನತಾ ದರ್ಶನದ ಉದ್ದೇಶವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.ತಾಲೂಕಿನ ಹಳೆಯ ಬೂದನೂರು ಗ್ರಾಮದಲ್ಲಿ ಜನತಾ ದರ್ಶನ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಬಸರಾಳು, ಕೆರಗೋಡು ಗ್ರಾಮಗಳಲ್ಲಿ ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಆಯೋಜಿಸಲಾಗುತ್ತಿತ್ತು. ಸುಮಾರು 5 ಸಾವಿರ ಜನರು ಭಾಗವಹಿಸಿ ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿದ್ದರು ಎಂದರು.
ಸ್ವೀಕೃತವಾದ ಅರ್ಜಿಗಳನ್ನು ಒಂದು ತಿಂಗಳು ಕಾಲಮಿತಿಯೊಳಗೆ ಪರಿಹರಿಸಲಾಗುತ್ತಿತ್ತು. ಸುಮಾರು ಶೇ. 90ರಷ್ಟು ಅರ್ಜಿಗಳು ವಿಲೇವಾರಿಯಾಗಿ ಪರಿಹಾರ ಒದಗಿಸಲಾಗಿದೆ. ಶೇ.10ರಷ್ಟು ಕಾನೂನು ತೊಡಕುಗಳಿಂದ ಪರಿಹರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.ಹೋಬಳಿ ಮಟ್ಟದಲ್ಲಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಗ್ರಾಮ ಮಟ್ಟಕ್ಕೆ ಪರಿವರ್ತಿಸಿ, ಇಂದು ಬೂದನೂರು ಗ್ರಾಮದಲ್ಲಿ ಜನತಾ ದರ್ಶನವನ್ನು ಆಯೋಜಿಸಲಾಗಿದೆ. ನಗರ ಪ್ರದೇಶದಲ್ಲೂ ಮನೆ ಮನೆಗಳಿಗೆ ತೆರಳಿ ವಾರ್ಡ್ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ 14 ವಾರ್ಡ್ಗಳಲ್ಲಿ ಮನೆ- ಮನೆಗೆ ಭೇಟಿ ಮಾಡಲಾಗಿದೆ ಎಂದರು.
ಬೂದನೂರು ಗ್ರಾಮದಲ್ಲಿ ಇ- ಸ್ವತ್ತು ಆಂದೋಲನವನ್ನು ಹಮ್ಮಿಕೊಂಡು ಕಾಲಮಿತಿಯೊಳಗೆ ಇ- ಸ್ವತ್ತು ವಿತರಣೆಯಾಗಬೇಕು ಎಂದು ತಾಪಂ ಇಒಗೆ ಸೂಚಿಸಲಾಗಿದೆ. ಇಂದು ಸ್ವೀಕೃತವಾಗಿರುವ ಅರ್ಜಿಗಳನ್ನು ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹರಿಸಲಾಗುವುದು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ನೀಡಿ ಒಂದು ತಿಂಗಳೊಳಗೆ ಪರಿಹರಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಸುಮಾರು 15 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ.
ಗ್ರಾಮ ಮಟ್ಟದಲ್ಲಿ ಪೌತಿ ಖಾತೆ, ಇ- ಸ್ವತ್ತು ಆಂದೋಲನ, ಜನತಾ ದರ್ಶನ ಕಾರ್ಯಕ್ರಮ ಆಯೋಜನೆಗಳಿಂದ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದರ್, ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.