ಸಾರಾಂಶ
ಹಳಿಯಾಳ: ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆಯಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚುತ್ತಿದೆ. ಆಶ್ರಯ ಮನೆಗಳ ಬಾಡಿಗೆಗೆ ನೀಡಲಾಗುತ್ತಿದ್ದರೆ, ಇನ್ನೊಂದೆಡೆ ಮಾರಾಟ ನಡೆದಿದೆ, ಹೆಸರಿಗೆ ಮಾತ್ರ ನಿರಂತರ ನೀರು ಯೋಜನೆಯಾಗಿದ್ದು ಮಳೆಗಾಲದಲೂ ಪಟ್ಟಣದಲ್ಲಿ ಜಲಕ್ಷಾಮ, ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಸ್ಥರಿಂದ ಅತಿಕ್ರಮಣವಾಗುತ್ತಿದೆ...
ಇವು ಗುರುವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಪುರಭವನದಲ್ಲಿ ಜನಸ್ಪಂದನ ಸಭೆಯಲ್ಲಿ ಕೇಳಿಬಂದ ಅಹವಾಲುಗಳು.ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಿಂದ ಆಗಮಿಸಿದ ಜನರು ತಮ್ಮ ಅಹವಾಲುಗಳನ್ನು ಶಾಸಕರೆದುರು ತೋಡಿಕೊಂಡರು. ಅಹವಾಲುಗಳನ್ನು ಆಲಿಸಿದ ದೇಶಪಾಂಡೆ ಅವರು ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಕೆಲವು ಸಮಸ್ಯೆಗಳ ಬಗೆಹರಿಸುವ ಜವಾಬ್ದಾರಿಯನ್ನು ಸಂಬಂಧಿತ ಇಲಾಖೆಗಳಿಗೆ ವಹಿಸಿ, ನಿಗದಿತ ಕಾಲಾವಧಿಯಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಚಿಸಿದರು.ಸಕ್ಕರೆ ಕಾರ್ಖಾನೆ ವಿರುದ್ಧ ದೂರು: ದೇಶಪಾಂಡೆ ಆಶ್ರಯ ಬಡಾವಣೆ ನಿವಾಸಿಯೊಬ್ಬರು ಸ್ಥಳೀಯ ಸಕ್ಕರೆ ಕಾರ್ಖಾನೆಯಿಂದ ವಾಯುಹಾಗೂ ಶಬ್ದ ಮಾಲಿನ್ಯವಾಗುತ್ತಿದ್ದು, ಕಾರ್ಖಾನೆ ಹೊರಸೂಸುವ ಧೂಳು, ಹೊಗೆಯಿಂದ ಜೀವನ ನಡೆಸಲು ಕಷ್ಟದಾಯಕವಾಗಿದೆ ಎಂದರು. ಅದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.
ಪಟ್ಟಣದಲ್ಲಿನ ಆಶ್ರಯ ಮನೆಗಳನ್ನು ಬಾಡಿಗೆಗೆ ನೀಡಲಾಗುತ್ತಿದ್ದು, ಇನ್ನೂ ಕೆಲವರು ಮಾರಾಟ ಮಾಡುತ್ತಿದ್ದಾರೆ ಎಂಬ ದೂರನ್ನು ಆಲಿಸಿದ ಶಾಸಕರು, ಬಾಡಿಗೆ ನೀಡಿದ ಹಾಗೂ ಮಾರಾಟ ಮಾಡಿದ ಆಶ್ರಯ ಮನೆಗಳನ್ನು ತಾಬಾ ವಹಿಸಿಕೊಳ್ಳಬೇಕೆಂದು ಮುಖ್ಯಾಧಿಕಾರಿಗೆ ಆದೇಶಿಸಿದರು.ಕುಡಿಯುವ ನೀರಿನ ಸಮಸ್ಯೆಗೆ ಪ್ರತಿಕ್ರಿಯಿಸಿದ ಶಾಸಕರು, ಸಮಸ್ಯೆಯನ್ನು ಬೇಗನೆ ಬಗೆಹರಿಸಿ, ಮನೆ ಕಟ್ಟಲು ಕುಡಿಯುವ ನೀರು ಬಳಸುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದರು. ಪಟ್ಟಣದ ಮಾರುಕಟ್ಟೆಯಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ಮಾಡಿದ ಆತಿಕ್ರಮಣ ತೆರವುಗೊಳಿಸಲು ಸೂಚಿಸಿದರು.ಜನಪರ ಆಡಳಿತ ನಡೆಸಿ: ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವರೇ ಅಧಿಕಾರಿಗಳು. ಹೀಗಿರುವಾಗ ಅಧಿಕಾರಿಗಳು ಜನಪರ ಆಡಳಿತ ನಡೆಸಿದರೆ ಸರ್ಕಾರಕ್ಕೂ ನಮಗೂ ಹೆಸರು ಬರುತ್ತದೆ ಎಂದು ದೇಶಪಾಂಡೆ ಹೇಳಿದರು. ಆದಷ್ಟು ಅಧಿಕಾರಿಗಳು ಪಾರದರ್ಶಕ ಹಾಗೂ ಭ್ರಷ್ಟಾಚಾರರಹಿತ ಸೇವೆಯನ್ನು ಸಲ್ಲಿಸಬೇಕು. ಕಚೇರಿಗೆ ಬರುವ ಪ್ರತಿಯೊಬ್ಬರಿಗೆ ಕುರ್ಚಿ ಕೊಟ್ಟು ಅವರ ಅಹವಾಲುಗಳನ್ನು ಆಲಿಸಬೇಕು ಎಂದರು. ರಾಜಕೀಯ ಮಾಡಬೇಡಿ: ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಪ್ರತಿಯೊಂದು ಸಮಯ ರಾಜಕೀಯ ಮಾಡಿದರೆ ಸರಿಯಲ್ಲ ಎಂದ ದೇಶಪಾಂಡೆ, ನನ್ನ ಬಳಿ ಯಾರೂ ಬಂದರೂ ಪಕ್ಷಾತೀತವಾಗಿ ಸಹಾಯ, ಸಹಕಾರ ಮಾಡುತ್ತೇನೆ ಎಂದರು.
ಅಧಿಕಾರಿಗಳು ಯಾರ ಕೈಗೊಂಬೆಯಾಗದೇ ಯಾರ ಒತ್ತಡಕ್ಕೂ ಒಳಗಾಗದೇ ಕಾನೂನುಬದ್ಧವಾಗಿ ಸೇವೆ ಸಲ್ಲಿಸಿ ಎಂದು ತಾಕಿತು ಮಾಡಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ ಮಾತನಾಡಿದರು. ತಾಪಂ ಇಒ ಪರಶುರಾಮ ಘಸ್ತೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಪುರಸಭಾ ಸದಸ್ಯರು ಸಭೆಯಲ್ಲಿದ್ದರು.