ವಟಗಲ್ ಮತ್ತು ಬಸಾಪುರದಲ್ಲಿ ಶಾಸಕರಿಂದ ಜನಸ್ಪಂದನ ಸಭೆ

| Published : Mar 13 2024, 02:03 AM IST

ಸಾರಾಂಶ

ಕವಿತಾಳ ಸಮೀಪದ ವಟಗಲ್ ಮತ್ತು ಬಸಾಪುರ ಗ್ರಾಮಗಳಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಿತು.

ಕವಿತಾಳ: ವಟಗಲ್ ಮತ್ತು ಬಸಾಪುರ ಗ್ರಾಮಗಳಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ನಡೆಯಿತು.

ಪಟ್ಟಾ ಜಮೀನಿನ ಪಹಣಿಯಲ್ಲಿ ಸರ್ಕಾರದ ಹೆಸರು ತೋರಿಸುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಐದು ಅಕ್ಕಿಗೆ ಕೆಜಿಗೆ ಬದಲು ಮೂರು ಕೆಜಿ ಅಕ್ಕಿ ನೀಡುತ್ತಿದ್ದಾರೆ. ಒಂದು ಕಾರ್ಡಿಗೆ ಹತ್ತು ರುಪಾಯಿ ನೀಡಬೇಕು, ಚರಂಡಿ ತುಂಬಿ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿದೆ ಅಭಿವೃದ್ಧಿ ಅಧಿಕಾರಿಗೆ ಹೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಬಯಲು ಶೌಚಾಲಯ ತೆರವುಗೊಳಿಸಿದ್ದು, ಮಹಿಳೆಯರು ಬಯಲು ಪ್ರದೇಶದಲ್ಲಿ ಶೌಚಕ್ಕೆ ತೆರಳುವಂತಾಗಿದೆ. ಬೀದಿ ದೀಪಗಳಿಲ್ಲ, ವಿದ್ಯುತ್ ತಂತಿಗಳು ಜೋತು ಬಿದ್ದು ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಎಂತಹ ಸರ್ಕಾರ ಎಂದು ವಟಗಲ್ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಕ್ಲಾಸ್ಪುರ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸರ್ಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದೆ ಅದು ಎಲ್ಲಿದೆ ಎನ್ನವುದು ಯಾರಿಗೂ ಗೊತ್ತಿಲ್ಲ ದಯಮಾಡಿ ಅದನ್ನು ಹುಡುಕಿ ಕೊಡಿ ಎಂದು ಜನರು ಒತ್ತಾಯಿಸಿದರು.

ಸರ್ಕಾರ ಅಭಿವೃದ್ಧಿ ಕೆಲಸಗಳ ಜೊತೆಗೆ ಜನ ಸಾಮಾನ್ಯರ ತೊಂದರೆ ಪರಿಹರಿಸಲು ಸಾಕಷ್ಟು ಆದ್ಯತೆ ನೀಡುತ್ತಿದೆ. ಈ ರೀತಿಯ ಲೋಪಗಳಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಕೆಲಸ ಮಾಡುವ ಮನಸ್ಸು ಇಲ್ಲದಿದ್ದರೆ ಬಿಟು ಹೋಗಬಹುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ, ಗ್ರಾಮಸ್ಥರು ಇದ್ದರು.