ಮೆಟ್ರೋದಲ್ಲಿ ಬೆಟ್ಟಿಂಗ್‌ ಜಾಹೀರಾತಿಗೆ ಸಾರ್ವಜನಿಕರ ಆಕ್ಷೇಪ

| Published : May 17 2024, 12:35 AM IST / Updated: May 17 2024, 07:25 AM IST

ಮೆಟ್ರೋದಲ್ಲಿ ಬೆಟ್ಟಿಂಗ್‌ ಜಾಹೀರಾತಿಗೆ ಸಾರ್ವಜನಿಕರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋದಲ್ಲಿ ಅಳವಡಿಸಲಾದ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಜಾಹೀರಾತು, ಭಿತ್ತಿಚಿತ್ರಗಳ ಕಂಡ ಪ್ರಯಾಣಿಕರು ಈ ಚಿತ್ರವನ್ನು ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.

 ಬೆಂಗಳೂರು : ನಮ್ಮ ಮೆಟ್ರೋ ರೈಲಿನ ಒಳಭಾಗದಲ್ಲಿ ಕ್ರೀಡಾ ಸಂಬಂಧಿತ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳ ಕುರಿತ ಜಾಹೀರಾತು ಅಳವಡಿಕೆಗೆ ಹಲವು ಪ್ರಯಾಣಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ರೀತಿ ಜಾಹೀರಾತು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಮೆಟ್ರೋ ರೈಲಿನೊಳಗೆ ಬೆಟ್ಟಿಂಗ್ ಆ್ಯಪ್‌ವೊಂದರ ಜಾಹೀರಾತು ಭಿತ್ತಿಚಿತ್ರ ಅಂಟಿಸಲಾಗಿದೆ. ಕ್ರಿಕೆಟ್ ಸಂಬಂಧಿತ ಜಾಹೀರಾತು ಇದಾಗಿದ್ದು, ಕಾರು ಗೆಲ್ಲುವ ಅವಕಾಶ ಪಡೆಯುವಂತೆ ಅದರಲ್ಲಿ ಹೇಳಲಾಗಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.

ಇಂತಹ ಭಿತ್ತಿ ಪತ್ರ ಅಂಟಿಸುವ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಯಾಣಿಕರಿಗೆ ಯಾವ ರೀತಿಯ ಸಂದೇಶ ನೀಡುತ್ತಿದೆ? ಬೆಟ್ಟಿಂಗ್‌ ಆನ್‌ಲೈನ್‌ ಗ್ಯಾಂಬ್ಲಿಂಗ್‌ ಆ್ಯಪ್‌ ಚಿತ್ರವನ್ನು ಬಿತ್ತರಿಸುವುದು ಸರಿಯಲ್ಲ. ಈ ರೀತಿಯ ಜೂಜಾಟದ ಆ್ಯಪ್‌ಗಳಿಂದ ಹಲವರು ಹಣ ಮಾತ್ರವಲ್ಲದೆ ಜೀವವನ್ನೂ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ ಹಲವು ಉದಾಹರಣೆಗಳಿವೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿಯೂ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾಕಷ್ಟು ವಿದ್ಯಾರ್ಥಿಗಳು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಅವರ ಮೇಲೆ ಇದು ದುಷ್ಪರಿಣಾಮ ಬೀರಲಿದ್ದು ಬೆಟ್ಟಿಂಗ್‌ಗೆ ಪ್ರಚೋದನೆ ನೀಡುವಂತಿದೆ. ಅಲ್ಲದೆ, ರಾಜ್ಯ ಸರ್ಕಾರ ಒಂದು ಕಡೆ ಆನ್‌ಲೈನ್‌ ಗೇಮ್‌, ಬೆಟ್ಟಿಂಗ್ ಆ್ಯಪ್‌ಗಳ ಬಗ್ಗೆ ತನ್ನ ವಿರೋಧಿ ನಿಲುವು ಹೊಂದಿದ್ದು, ಇನ್ನೊಂದೆಡೆ ಸರ್ಕಾರಿ ಸ್ವಾಮ್ಯದ ಸರ್ಕಾರಿ ಸಂಸ್ಥೆಯ ಸಾರ್ವಜನಿಕ ಸಾರಿಗೆಯಲ್ಲಿ ಈ ಜಾಹೀರಾತು ಪ್ರಕಟಿಸುವುದು ಎಷ್ಟು ಸರಿ? ಇದು ಕಾನೂನು ಬದ್ಧವೇ ಅಥವಾ ನೈತಿಕತೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಎಂಆರ್‌ಸಿಎಲ್‌ ಇಂತಹ ಜಾಹೀರಾತನ್ನು ತೆರವು ಮಾಡಬೇಕು. ಈ ಮೂಲಕ ಸಾಮಾಜಿಕ ಸ್ವಾಸ್ಥ್ಯದ ಕಳಕಳಿ ವ್ಯಕ್ತಪಡಿಸಿ ತನ್ನ ಜವಾಬ್ದಾರಿ ತೋರ್ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.