ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಮುಖಂಡ ಭರತ್ ಕುಮ್ದೇಲ್ ಸೇರಿದಂತೆ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಜಾರಿಗೊಳಿಸಿರುವ ಪೊಲೀಸ್ ಇಲಾಖೆಯ ಕ್ರಮ ಖಂಡನೀಯವಾಗಿದ್ದು, ಇದರಿಂದ ಕರಾವಳಿಯ ಹಿಂದೂ ಸಮಾಜದಲ್ಲಿ ತೀವ್ರ ಆಕ್ರೋಶ ಉಂಟಾಗಿದೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟಿದ್ದಾರೆ.

ಬಂಟ್ವಾಳ : ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಮುಖಂಡ ಭರತ್ ಕುಮ್ದೇಲ್ ಸೇರಿದಂತೆ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಜಾರಿಗೊಳಿಸಿರುವ ಪೊಲೀಸ್ ಇಲಾಖೆಯ ಕ್ರಮ ಖಂಡನೀಯವಾಗಿದ್ದು, ಇದರಿಂದ ಕರಾವಳಿಯ ಹಿಂದೂ ಸಮಾಜದಲ್ಲಿ ತೀವ್ರ ಆಕ್ರೋಶ ಉಂಟಾಗಿದೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟಿದ್ದಾರೆ.ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 23 ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇವರ ಪೈಕಿ ಕೆಲವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕವೂ, ಮತ್ತೆ ಗೂಂಡಾ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಮೂಲಕ ಬಂಧನದ ಭೀತಿ ಸೃಷ್ಟಿಸಲಾಗಿದೆ. ಈ ಪೊಲೀಸ್ ಪ್ರಕ್ರಿಯೆ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದ್ದು, ಕರಾವಳಿಯಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಕಾರ್ಯಕರ್ತರನ್ನು ನಿರಂತರವಾಗಿ ಗುರಿಯಾಗಿಸುವಂತಹ ಪೊಲೀಸ್ ಕ್ರಮಗಳು ಮುಂದುವರಿದರೆ, ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ಹಿಂದೂ ಸಮಾಜದ ವತಿಯಿಂದ ಪ್ರತಿಭಟನೆಗಳು ಹಾಗೂ ಶಕ್ತಿ ಪ್ರದರ್ಶನ ನಡೆಯಲಿದ್ದು, ಆಡಳಿತ ವ್ಯವಸ್ಥೆಯ ವಿರುದ್ಧ ಜನರು ಧ್ವನಿ ಎತ್ತಲಿದ್ದಾರೆ ಎಂದು ಪ್ರಭಾಕರ ಪ್ರಭು ಎಚ್ಚರಿಸಿದ್ದಾರೆ.