ಕೋಲಾರಮ್ಮ ಕೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲ ಮೂಲವಾಗಿದೆ. ಇಂತಹ ಕೆರೆಗೆ ಶುದ್ಧೀಕರಿಸದ ಕೊಳಚೆ ನೀರು ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ತೀವ್ರವಾಗಿ ಹದಗೆಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಜನರ ಆರೋಗ್ಯದ ಜೊತೆ ಚೆಲ್ಲಾಟ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಸ್ಕಂದಕುಮಾರ್ ಬಿ.ಎಸ್
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿನ ಕೊಳಚೆ ನೀರನ್ನು ಶುದ್ಧೀಕರಣವಿಲ್ಲದೆ ನೇರವಾಗಿ ಕೋಲಾರಮ್ಮ ಕೆರೆಗೆ ಬಿಡಲಾಗುತ್ತಿದ್ದು ನಾಗರಿಕರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೆರೆಗೆ ನೀರು ಹರಿಸುವ ಮೊದಲು ಶುದ್ಧೀಕರಣ ಕಡ್ಡಾಯವಾಗಿದ್ದರೂ, ನಗರದಲ್ಲಿ ಇದಕ್ಕಾಗಿ ಅಗತ್ಯವಾದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪನೆಯೇ ಆಗಿಲ್ಲ. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ಆದೇಶದ ಉಲ್ಲಂಘನೆಯಾಗಿದ್ದು, ನಗರಸಭೆಯ ಆಡಳಿತ ವೈಫಲ್ಯ ತೋರಿಸುತ್ತದೆ.
ಕೋಲಾರಮ್ಮ ಕೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲ ಮೂಲವಾಗಿದೆ. ಇಂತಹ ಕೆರೆಗೆ ಶುದ್ಧೀಕರಿಸದ ಕೊಳಚೆ ನೀರು ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ತೀವ್ರವಾಗಿ ಹದಗೆಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಜನರ ಆರೋಗ್ಯದ ಜೊತೆ ಚೆಲ್ಲಾಟ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ನಗರದ ಕೊಳಚೆ ನೀರನ್ನು ಶುದ್ಧೀಕರಿಸಲು ಕನಿಷ್ಠ ಮಟ್ಟದ ಯೋಜನೆಯನ್ನೂ ನಗರಸಭೆ ಇದುವರೆಗೆ ಸಿದ್ಧಪಡಿಸಿಲ್ಲ ಎಂಬುದು ಗಂಭೀರ ಸಂಗತಿ. ಎನ್‌ಜಿಟಿಯು ಜಲಮೂಲಗಳಿಗೆ ನೇರವಾಗಿ ಮಲೀನ ನೀರು ಹರಿಸುವುದನ್ನು ನಿಷೇಧಿಸಿ ಆದೇಶ ನೀಡಿದ್ದು, ಈಗಾಗಲೇ ಎಂಟು ವರ್ಷಗಳು ಕಳೆದರೂ, ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಕೈಗನ್ನಡಿಯಾಗಿದೆ.
ನಗರಸಭೆಯ ಕಾರ್ಯವೈಖರಿ ಕೇವಲ ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತೆಗೆಯುವಲ್ಲಿ ಮಾತ್ರ ಸೀಮಿತವಾಗಿದೆ ಎನ್ನಲಾಗುತ್ತಿದೆ. ಆದರೆ ನಗರದಲ್ಲಿರುವ ಹಲವಾರು ಹೋಟೆಲ್‌ಗಳು, ಬೇಕರಿಗಳು, ರಾಸಾಯನಿಕ ಉತ್ಪನ್ನ ಸಂಸ್ಥೆಗಳು, ಮಾಂಸದ ಅಂಗಡಿಗಳು ಹಾಗೂ ಗೃಹ ಕೈಗಾರಿಕೆಗಳಿಂದ ಉತ್ಪತ್ತಿಯಾಗುತ್ತಿರುವ ಮಾಲಿನ್ಯಯುಕ್ತ ನೀರಿನ ಬಗ್ಗೆ ಯಾವುದೇ ನಿಯಂತ್ರಣ ಅಥವಾ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪಗಳಿವೆ. ಈ ಎಲ್ಲ ತ್ಯಾಜ್ಯ ನೀರು ರಾಜಕಾಲುವೆಗಳ ಮೂಲಕ ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಜಲ ಮಾಲಿನ್ಯ ಮತ್ತಷ್ಟು ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.ಇದರ ಜೊತೆಗೆ ನಗರಸಭೆಯಲ್ಲಿ ಅಗತ್ಯ ಸಿಬ್ಬಂದಿಯ ಕೊರತೆ ತೀವ್ರವಾಗಿದೆ. ನೈರ್ಮಲ್ಯ ಮತ್ತು ಪರಿಸರ ನಿರ್ವಹಣೆಗೆ ಬೇಕಾದ ತಂತ್ರಜ್ಞರೇ ಇಲ್ಲದ ಸ್ಥಿತಿ ಇದೆ. ಇರುವ ಅಧಿಕಾರಿಗಳಿಗೆ ಹೊಸ ನಿಯಮಗಳು, ತಾಂತ್ರಿಕ ಅಪ್‌ಡೇಟ್‌ಗಳ ಬಗ್ಗೆ ಅರಿವು ಪಡೆಯಲು ಸಮಯವೂ ಇಲ್ಲ, ಸಂಪನ್ಮೂಲಗಳ ಕೊರತೆಯು ಇದೆ ಎನ್ನಲಾಗುತ್ತಿದೆ.
ಒಟ್ಟಾರೆ ನಗರಸಭೆಯ ಕಾರ್ಯ ವೈಫಲ್ಯದಿಂದ ಕೋಲಾರ ನಗರದ ಜನರ ಆರೋಗ್ಯ ಹಾಗೂ ಭವಿಷ್ಯ ಅಪಾಯದ ಅಂಚಿಗೆ ತಲುಪಿದೆ. ಎನ್‌ಜಿಟಿ ಆದೇಶಗಳ ಅನುಸಾರ ತಕ್ಷಣವೇ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಕೋಲಾರಮ್ಮ ಕೆರೆಯ ಸಂರಕ್ಷಣೆಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಹೆಚ್ಚಾಗುತ್ತಿದೆ.-------