ಸಾರಾಂಶ
- ಹಂಗರವಳ್ಳಿಯಲ್ಲಿ ಆವತಿ ಹೋಬಳಿ ಮಟ್ಟದ ರೈತ ಸಮಾವೇಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಸ್ಯೆ ಪರಿಹಾರ ಮಾಡುವಾಗ ಸಮಸ್ಯೆ ಸೃಷ್ಠಿ ಮಾಡುವವರೂ ಜೊತೆಗಿರಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಪರಿಹಾರವಾಗುವುದಿಲ್ಲ. ಮಲೆನಾಡಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳಲ್ಲಿ ಕೆಲವು ಕೇಂದ್ರ, ಇನ್ನು ಕೆಲವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ರಾಜ್ಯ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಮುಂದಿನ ಪೀಳಿಗೆಗೆ ಇಲ್ಲಿನ ಸಮಸ್ಯೆ ಇರದಂತೆ ನೋಡಿಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಹಂಗರವಳ್ಳಿಯಲ್ಲಿ ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಜಿಲ್ಲಾ ಬೆಳೆಗಾರರ ಸಂಘ, ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ಆವತಿ ಹೋಬಳಿ ಮಟ್ಟದ ಬೃಹತ್ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದೆ ಬರಬೇಕಿದೆ. ಈ ವೇಳೆ ಕಾರ್ಯಾಂಗ ಹಾಗೂ ಶಾಸಕಾಂಗ ಎರಡರ ಉಪಸ್ಥಿತಿ ಇದ್ದಾಗ ನ್ಯಾಯಾಂಗವೂ ಸ್ವಲ್ಪ ಮಟ್ಟಿಗೆ ಸರಿ ಬರುತ್ತದೆ. ಆಗ ಸಾಮಾನ್ಯ ಬಡವ ನೊಬ್ಬ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಂದಾಯ ಭೂಮಿ ಯಾವುದು ಅರಣ್ಯ ಭೂಮಿ ಯಾವುದು ಗುರುತಿಸುವುದು ಕಷ್ಟ. ಆದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ನಿರ್ಧಿಷ್ಟ ದಿನ ಗುರುತಿಸಿ ಒಂದು ಗ್ರಾಪಂ ವ್ಯಾಪ್ತಿಯಲ್ಲಿ ಕರಾರುವಕ್ಕಾಗಿ ಸರ್ವೇ ನಡೆಸಬೇಕು. ಪ್ರತಿ ತಿಂಗಳಿಗೊಮ್ಮೆ ಇದರ ಪ್ರಗತಿ ಪರಿಶೀಲನೆ ನಡೆಸಬೇಕು. ನಮೂನೆ 50, 53, 57 ಏನು ಹೇಳುತ್ತವೆ ಎಂಬ ಬಗ್ಗೆ ನಿರಂತರ ವಾಗಿ ಚರ್ಚೆ ನಡೆಯುತ್ತಿರಬೇಕು. ಆಗ ಅರ್ಹರಿಗೆ ಭೂಮಿ ಹೇಗೆ ನೀಡಬಹುದು ಎಂಬ ಬಗ್ಗೆ ಒಂದು ದಾರಿ ಸಿಗುವ ಸಾಧ್ಯತೆ ಇರುತ್ತದೆ ಎಂದರು.ಸರ್ಕಾರ ಎಂದರೆ ಯಾವುದೇ ಪಕ್ಷವಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳು ಸೇರಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇದು ತಳ ಮಟ್ಟದಿಂದಲೂ ಆಗಬೇಕು. ಜನಪ್ರತಿನಿಧಿಗಳು ಜನರಿಗಾಗಿ ಸ್ವಲ್ಪವಾದರೂ ಗಟ್ಟಿತನ ತೋರಬೇಕು ಎಂದು ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ಬ್ರೆಜಿಲ್ ಕಾರಣದಿಂದ ಭಾರತದ ಕಾಫಿಗೆ ಹೆಚ್ಚಿನ ಬೆಲೆ ಬಂದಿದೆ. ಆದರೆ ಇದೇ ಬೆಲೆಯನ್ನು ಬೆಳೆಗಾರರು ಮುಂದೆಯೂ ನಿರೀಕ್ಷೆ ಮಾಡುವುದು ಸರಿಯಲ್ಲ. ಬೆಲೆ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಬೆಲೆ ಏರಿಕೆ ಇಳಿಕೆ ಬಗ್ಗೆ ಬೆಳೆಗಾರರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಿಗೋಡಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳು ವುದಾಗಿ ತಿಳಿಸಿದರು.ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರಮಕ್ಕಿ ಮಹೇಶ್ ಮಾತನಾಡಿ, ಕಂದಾಯ ಮತ್ತು ಅರಣ್ಯ ಭೂಮಿ ಬೇರ್ಪಡಿಸದೆ ಇರುವ ಕಾರಣ ಪೋಡಿ ಮಾಡಲು ಸಮಸ್ಯೆ ತಲೆದೋರಿದೆ. ಜೊತೆಗೆ ಅನೇಕ ಕಂದಾಯ ಭೂಮಿ ಸಮಸ್ಯೆಗಳೂ ಇವೆ. ಅರಣ್ಯ ಭೂಮಿ ಡೀಮ್ಡ್ ಆಗಿ ಪರಿವರ್ತನೆಯಾಗಿದೆ. ಪರಿಭಾವಿತ ಅರಣ್ಯ, ಸೆಕ್ಷನ್ 4(1), ಈ ಸಮಸ್ಯೆಗಳ ಜೊತೆಗೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿ ಸಣ್ಣ ಬೆಳೆಗಾರರು ಬೆಳೆದಿರುವ ಕಾಫಿ, ಅಡಕೆ, ಕಾಳು ಮೆಣಸು ಪ್ರತಿನಿತ್ಯ ಕಾಡಾನೆಗಳ ದಾಳಿಯಿಂದ ಹಾನಿಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋಬಳಿ ಮಟ್ಟದ ರೈತ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.ಸಮಾವೇಶದಲ್ಲಿ ಮುಖಂಡರಾದ ಎಸ್.ವಿಜಯಕುಮಾರ್, ಡಿ.ಸಿ.ಅರುಣ್‌ಕುಮಾರ್, ಎಚ್.ಪಿ. ರಮೇಶ್, ಎಚ್.ಕೆ. ಜಗದೀಶ್, ಬಿ.ಇ. ನಾಗೇಶ್, ಎಚ್.ಜಿ. ಗಣೇಶ್, ಪ್ರದೀಪ್, ಸಚ್ಚಿದಾನಂದ, ಮೋಹನ್‌ಕುಮಾರ್, ಎಂ.ಎನ್ ಸುಜಾತ, ವಸಂತಮ್ಮ, ಎಚ್.ಬಿ ಸುರೇಶ್ ಇದ್ದರು.
29 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಹಂಗರವಳ್ಳಿಯಲ್ಲಿ ನಡೆದ ಆವತಿ ಹೋಬಳಿ ಮಟ್ಟದ ರೈತ ಸಮಾವೇಶವನ್ನು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿದರು. ದಿನೇಶ್ ದೇವವೃಂದ, ಕೆರೆಮಕ್ಕಿ ಮಹೇಶ್, ಅರುಣ್ ಕುಮಾರ್ ಇದ್ದರು.