ಮದೆ ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ

| Published : Aug 10 2025, 01:37 AM IST

ಸಾರಾಂಶ

ಪ್ರತಿ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಇತ್ತೀಚೆಗೆ ಮದೆ ಗ್ರಾಮದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಕೆನರಾ ಬ್ಯಾಂಕ್, ಮೈನ್ ಬ್ರಾಂಚ್, ಮಡಿಕೇರಿ ಶಾಖೆ ಇವರ ಸಹಯೋಗದೊಂದಿಗೆ ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ, ಮದೆ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಕೇಂದ್ರ ಸರ್ಕಾರದ ಆದೇಶದಂತೆ ಆಯಾಯ ಗ್ರಾಮದ ಬ್ಯಾಂಕ್ ಶಾಖೆ ಮುಖಾಂತರ ಪ್ರತೀ ವರ್ಷವೂ ನಡೆಸುವ ಜನ ಸುರಕ್ಷಾ ಅಭಿಯಾನ ಇತ್ತೀಚೆಗೆ ಮದೆ ಗ್ರಾಮದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆನರಾ ಬ್ಯಾಂಕ್ ನ ಎಜಿಎಂ ರವರಾದ ರಾಜೇಶ್ ಕುಮಾರ್ ವಿ. ಅವರು ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ 20 ರು. ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 2 ಲಕ್ಷಗಳ ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು.

ವಾರ್ಷಿಕವಾಗಿ 436 ರು. ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೂ ಕೂಡ 2 ಲಕ್ಷಗಳ ವಿಮಾಮೊತ್ತ ಸಿಗುವುದಾಗಿ ತಿಳಿಸಿದರು. ಎರಡನ್ನೂ ಮಾಡಿಸಿಕೊಂಡಲ್ಲಿ 4 ಲಕ್ಷ ರು. ಗಳವರೆಗಿನ ವಿಮಾ ಮೊತ್ತ ಸಿಗುವುದಾಗಿ ಮಾಹಿತಿ ನೀಡಿದರು.

ಅಲ್ಲದೆ 60ವಯಸ್ಸು ಆದ ನಂತರದಲ್ಲಿ ಪಿಂಚಣಿ ರೂಪದಲ್ಲಿ 1000 ರು. ಗಳಿಂದ 5000 ರು. ಗಳವರೆಗಿನ ಪಿಂಚಣಿ ಹಣ ಸಿಗಬೇಕಾದರೆ ಈವಾಗಲೇ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸುವಂತೆ ತಿಳಿಸಿದರು.

ನಂತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ನಬಾರ್ಡ್‍ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಎನ್ನುವ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು, ಇದರ ಮುಖ್ಯ ಉದ್ದೇಶವೂ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್‍ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದು ಅವಾರ್ಡ್ ಸಂಸ್ಥೆಯ ಸಮಾಲೋಚಕರಾದ ಪ್ರಿಯಾ ಕೆ.ಎಲ್.ಅವರು ತಿಳಿಸಿದರು.

ಮದೆ ಗ್ರಾಮ ಪಂಚಾಯತಿ ಸದಸ್ಯರು ಮಾತನಾಡಿ ಈ ಒಂದು ಕಾರ್ಯಕ್ರಮವು ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಕೆನರಾ ಬ್ಯಾಂಕ್ ನ ಎಜಿಎಂ ರಾಜೇಶ್ ಕುಮಾರ್ ವಿ, ಕೆನರಾ ಬ್ಯಾಂಕ್‍ನ ವ್ಯವಸ್ಥಾಪಕರಾದ ಅನೀಶ್ ಮೋಹನ್ ಅವರು ಉಪಸ್ಥಿತರಿದ್ದರು.