ಜಿ.ಮಾದೇಗೌಡರು ಗ್ರಾಮೀಣ ಮಕ್ಕಳು ಜ್ಞಾನವಂತರಾಗಲು ವಿದ್ಯಾಸಂಸ್ಥೆಗಳನ್ನು ತೆರೆದು ಲಕ್ಷಾಂತರ ಮಂದಿ ಬದುಕಿಗೆ ಆಶಾಕಿರಣವಾಗಿದ್ದಾರೆ. ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಆರೋಗ್ಯ ಸೇವೆ ಮಾಡುತ್ತಿದ್ದಾರೆ. ತಾತ ಮತ್ತು ತಂದೆ ಹಾದಿಯಲ್ಲಿ ಅವರ ಸುಪುತ್ರ ಅಶಯ ಮಧು ಕೂಡ ಸಾಗುತ್ತಿರುವುದು ಉತ್ತಮ ಬೆಳವಣಿಗೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರೈತ ಹೋರಾಟಗಾರ ದಿ.ಮಾಜಿ ಸಂಸದ ಜಿ.ಮಾದೇಗೌಡರು ಹಾಕಿ ಕೊಟ್ಟ ಮಾರ್ಗದಲ್ಲಿ ಜನಪರ ಸೇವೆ, ಸಾಮಾಜಿಕ ಕಾರ್ಯವನ್ನು ಅವರ ಪುತ್ರ ಎಂಎಲ್ಸಿ ಮಧು ಜಿ.ಮಾದೇಗೌಡ ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಶ್ಲಾಘಿಸಿದರು.ಸಮೀಪದ ಚಂದೂಪುರ ಗ್ರಾಮದಲ್ಲಿ ಆಶಯ್ ಮಧು ಜಿ.ಮಾದೇಗೌಡರ ಅಭಿಮಾನಿಗಳ ಬಳಗ, ಭಾರತಿ ಹೆಲ್ತ್ ಸೈನ್ಸ್ ಕಾಲೇಜುಗಳು, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ಭಾರತೀ ವಿದ್ಯಾಸಂಸ್ಥೆ ಸಿಇಒ ಅಶಯ್ ಮಧು ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿ.ಮಾದೇಗೌಡರು ಗ್ರಾಮೀಣ ಮಕ್ಕಳು ಜ್ಞಾನವಂತರಾಗಲು ವಿದ್ಯಾಸಂಸ್ಥೆಗಳನ್ನು ತೆರೆದು ಲಕ್ಷಾಂತರ ಮಂದಿ ಬದುಕಿಗೆ ಆಶಾಕಿರಣವಾಗಿದ್ದಾರೆ. ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಆರೋಗ್ಯ ಸೇವೆ ಮಾಡುತ್ತಿದ್ದಾರೆ. ತಾತ ಮತ್ತು ತಂದೆ ಹಾದಿಯಲ್ಲಿ ಅವರ ಸುಪುತ್ರ ಅಶಯ ಮಧು ಕೂಡ ಸಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.ಉಳ್ಳವರು ಆಡಂಬರದ ಮೂಲಕ ಹುಟ್ಟುಹಬ್ಬ ಆಚರಿಸುವ ಬದಲು ಆರೋಗ್ಯ ತಪಾಸಣೆಯಂತಹ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಆಚರಿಸಿಕೊಂಡರೆ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ತಂದೆ ತೋರಿದ ಮಾರ್ಗದಲ್ಲಿ ಸಾಗುವ ಮೂಲಕ ಗ್ರಾಮೀಣ ಭಾಗದ ಬಡ ಮಧ್ಯಮ ವರ್ಗದವರಿಗೆ ಉತ್ತಮ ಶಿಕ್ಷಣ ನೀಡುವ ಹಾಗೂ ವೈದ್ಯಕೀಯ ಸೇವೆ ಸಲ್ಲಿಸುವ ಜತೆಗೆ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದರು.2004 ರಿಂದ ನಿರಂತರವಾಗಿ ಸಂಸ್ಥೆ ವತಿಯಿಂದ ಬಿಜಿಎಸ್ ಆಸ್ಪತ್ರೆ ವೈದ್ಯರ ಸಹಕಾರದಲ್ಲಿ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ. ಲಕ್ಷಾಂತರ ಜನರಿಗೆ ಆರೋಗ್ಯ ಸೇವೆ ಮೂಲಕ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ, ಔ?ಧಿ ವಿತರಣೆ, ಶಸ್ತ್ರ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಭಾರತೀ ವಿದ್ಯಾಸಂಸ್ಥೆ ಸಿಇಒ ಅಶಯ್ ಮಧು ಮಾತನಾಡಿ, ಮದ್ದೂರು ಭಾಗದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಕಿರುಗಾವಲು ಭಾಗದಲ್ಲಿ ನಮ್ಮ ತಾತ ಜಿ.ಮಾದೇಗೌಡರು ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸಿ ಆರ್ಥಿಕವಾಗಿ ಪ್ರಬಲರಾಗಲು ಶ್ರಮಿಸಿದ್ದಾರೆ ಎಂದರು.ತಂದೆ ಮಧು ಮಾದೇಗೌಡರು ಚುನಾವಣೆಗಳಲ್ಲಿ ಸೋಲು, ಗೆಲುವು ಯಾವುದನ್ನು ಲೆಕ್ಕಿಸದೆ, ಕುಗ್ಗದೆ ನಿರಂತರವಾಗಿ ಜನರ ಸೇವೆ ಮಾಡುತ್ತಾ ಬರುತ್ತಿದ್ದಾರೆ. ತಾತ ರಾಜಕಾರಣದಲ್ಲಿ ಇದ್ದಾಗ ಅಧಿಕಾರದ ಮಹತ್ವ ನನಗೆ ತಿಳಿದಿರಲಿಲ್ಲಲ್ಲ. ಆದರೆ, ತಂದೆಯಿಂದ ಎಲ್ಲವನ್ನು ಕಲಿಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರ ಇರಲಿ, ಇಲ್ಲದಿರಲಿ ಸೇವಾ ಮನೋಭಾವ ರೂಢಿಸಿಕೊಂಡು ತಂದೆಯೊಂದಿಗೆ ಜನರೊಂದಿಗೆ ಇದ್ದು ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಚಂದೂಪುರ ರೇಣುಕಾ ಆಶ್ರಮ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ತಾಲೂಕು ಆರೋಗ್ಯಧಿಕಾರಿ ಡಾ.ರವಿಶಂಕರ್, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಯೂನಿಟ್ ಹೆಡ್ ಗಣೇಶ್ ಪ್ರಭು, ಭಾರತೀ ಹೆಲ್ತ್ ಸೈನ್ಸ್ಸ್ ನಿರ್ದೇಶಕ ಡಾ.ತಮಿಜ್‌ಮಣಿ, ಚಂದೂಪುರ ಡಿ.ಕೆ.ಗೌಡ ವಿದ್ಯಾ ಸಂಸ್ಥೆ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ಸೇರಿದಂತೆ ಮತ್ತಿತರಿದ್ದರು.