ಇಂದು ಕೂಡ್ಲಿಗಿಯಲ್ಲಿ ಪ್ರಜಾಸೇವೆ ಎನ್ನುವ ಹೊಸ ಇಲಾಖೆಗೆ ಚಾಲನೆ ನೀಡಲು ಜನರ ಅಹವಾಲು ಕೇಳಲು ಬರುತ್ತಿದ್ದಾರೆ.

ಭೀಮಣ್ಣ ಗಜಾಪುರ ಕೂಡ್ಲಿಗಿ

ಕೂಡ್ಲಿಗಿ ತಾಲೂಕಿನ ಜನತೆ ಊರಿಗೆ ಊರೇ ಗುಳೇ ಹೋಗಿದ್ದಾರೆ, ಇನ್ನೂ ಹೋಗುತ್ತಿದ್ದಾರೆ. ಇಲ್ಲಿಯ ಜನತೆ ಉದ್ಯೋಗ ಅರಸಿ ಹೋಗುವ ಪ್ರದೇಶಗಳು ಬರದ ಪಟ್ಟಿಯಲ್ಲಿ ಸೇರಿವೆ ಎಂಬುದೇ ಅಚ್ಚರಿ. ಆದರೆ ನಿಜವಾಗಿ ಬರಪೀಡಿತ ಪ್ರದೇಶವಾದ ಕೂಡ್ಲಿಗಿ, ಕೊಟ್ಟೂರು ತಾಲೂಕನ್ನು ಬರ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ಸ್ಥಳೀಯ ರೈತರು, ಕೂಲಿಕಾರ್ಮಿಕರು ರಾಜ್ಯ ಸರ್ಕಾರದ ಮೇಲೆ ತೀವ್ರ ಅಸಮಾಧಾನ ಹೊಂದಿದ್ದು, ಇತ್ತೀಚೆಗೆ ಕೂಡ್ಲಿಗಿ ಬಂದ್ ಮಾಡುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಕೂಡ್ಲಿಗಿಯಲ್ಲಿ ಪ್ರಜಾಸೇವೆ ಎನ್ನುವ ಹೊಸ ಇಲಾಖೆಗೆ ಚಾಲನೆ ನೀಡಲು ಜನರ ಅಹವಾಲು ಕೇಳಲು ಬರುತ್ತಿದ್ದಾರೆ. ಇಂದು ಬರ ಘೋಷಣೆ ಮಾಡುವ ನಿರೀಕ್ಷೆ ಇಲ್ಲಿಯ ಜನತೆ ಇಟ್ಟುಕೊಂಡಿದ್ದಾರೆ.

ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಶೇ.47 ರಷ್ಟು ಮಳೆ ಆಗಿದೆ. ಹೀಗಾಗಿ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ಬರಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಬರಪಟ್ಟಿಯಿಂದ ಆ ಎರಡು ತಾಲೂಕುಗಳು ಔಟ್ ಆಗಿವೆ ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಹೇಳುತ್ತಾರೆ.

ಮುಂಗಾರು ಬಿತ್ತನೆ ನಿರೀಕ್ಷೆಯಂತೆ ಮಾಡಿರಬಹುದು ಬಿತ್ತನೆ ಸಮಯದಲ್ಲಿ ಬಂದ ಒಂದೆರಡು ಸಾಧಾರಣ ಮಳೆ ಬಿಟ್ಟರೆ ಇಲ್ಲಿಯವರೆಗೂ ಒಂದು ಹಳ್ಳ ಹರಿಯುವ ಮಳೆ ಬಂದಿಲ್ಲ, ತಂತುರು ಮಳೆ ಬಂದರೆ ಭೂಮಿ ಸಹ ತೊಯ್ದಿಲ್ಲ ಇದು ವಾಸ್ತವ, ಇದು ಶಾಸಕರಿಗೂ ಗೊತ್ತು ಆದರೆ ಯಾಕೆ ಈ ಎರಡು ತಾಲೂಕುಗಳನ್ನು ಕೈ ಬಿಟ್ಟರೋ ಗೊತ್ತಿಲ್ಲ. ರಾಜ್ಯದಲ್ಲಿ 190 ತಾಲೂಕುಗಳಲ್ಲಿ ಬರ ಬಂದಿದೆ, ಆದರೆ 101 ತಾಲೂಕುಗಳನ್ನು ಮಾತ್ರ ಬರ ಎಂದು ಘೋಷಿಸಿದೆ.

ಕೆಲವು ಸಂಘಟನೆಗಳು ಇಂದು( ಸೆ.5) ಮುಖ್ಯಮಂತ್ರಿ ಬರುವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದರು ಆದರೆ ಅವರ ಮನವೊಲಿಸಿದ ಪೊಲೀಸರು ಪ್ರತಿಭಟನೆ ಕೈಬಿಡಲು ಸೂಚಿಸಿದ್ದಾರೆ.

ಕೂಡ್ಲಿಗಿ, ಕೊಟ್ಟೂರು ಅವಳಿ ತಾಲೂಕುಗಳಲ್ಲಿ ಮಳೆ ಇಲ್ಲದೇ ಬೆಳೆಗಳು ಕೈಗೆ ಬಂದಿಲ್ಲ, ಸುಟ್ಟು ಕರಕಲಾಗಿವೆ, ರೈತರು ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ, ಆ ಸಾಲ ತೀರಿಸಲು ಮಲೆನಾಡು ಬೆಂಗಳೂರು, ಮಂಗಳೂರು ಕಡೆ ಕೆಲಸ ಅರಸಿ ಗುಳೇ ಹೋಗುತ್ತಿದ್ದಾರೆ, ಕೆರೆ ನೀರು ತುಂಬಿಸುವ ಯೋಜನೆಗೆ ಚಾಲನೆ ದೊರೆತರೂ ಪೂರ್ಣ ಪ್ರಮಾಣದಲ್ಲಿ ನೀರು ಹಾಯಿಸಲು ಸಾಧ್ಯವಾಗಿಲ್ಲ, ಆದರೂ ಈ ತಾಲೂಕುಗಳನ್ನು ಬರಪಟ್ಟಿಯಿಂದ ಕೈಬಿಟ್ಟಿದ್ದು ನೋಡಿದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎನಿಸುತ್ತದೆ ಎಂದು ಕಮ್ಯುನಿಷ್ಠ್ ಪಕ್ಷದ ಮುಖಂಡ ಗುನ್ನಳ್ಳಿ ರಾಘವೇಂದ್ರ ತಿಳಿಸಿದ್ದಾರೆ.